ರಾಖಿ ಆಚರಣೆ ಕಡ್ಡಾಯ: ಆದೇಶ ಹಿಂಪಡೆದ ಸರಕಾರ

Update: 2017-08-03 12:52 GMT

ಹೊಸದಿಲ್ಲಿ, ಆ.3: ಕೇಂದ್ರಾಡಳಿತ ಪ್ರದೇಶವಾದ ದಾಮನ್ ಮತ್ತು ದಿಯುವಿನಲ್ಲಿ ರಕ್ಷಾಬಂಧನ ಆಚರಣೆಯನ್ನು ಕಡ್ಡಾಯಗೊಳಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಡಳಿತ ವರ್ಗ ಈ ಆದೇಶವನ್ನು ಹಿಂಪಡೆದಿದೆ.

  ಆಗಸ್ಟ್ 7ರಂದು ರಕ್ಷಾಬಂಧನ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಂದು ಎಲ್ಲಾ ಸರಕಾರಿ ಕಚೇರಿ/ ಇಲಾಖೆ ತೆರೆದಿರುತ್ತದೆ. ಎಲ್ಲಾ ಸಿಬ್ಬಂದಿಗಳು ಒಟ್ಟಾಗಿ ಸೂಕ್ತ ಸಮಯದಲ್ಲಿ ಹಬ್ಬ ಆಚರಿಸಬೇಕು. ಮಹಿಳಾ ಉದ್ಯೋಗಿಗಳು ಪುರುಷ ಸಹೋದ್ಯೋಗಿಗಳಿಗೆ ರಾಖಿ ಕಟ್ಟಬೇಕು ಎಂದು ಉಪಕಾರ್ಯದರ್ಶಿ (ಸಿಬ್ಬಂದಿ) ಗುರ್‌ಪ್ರೀತ್ ಸಿಂಗ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿತ್ತು. ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಖೋಡಭಾ ಪಟೇಲ್ ಅವರ ನಿರ್ದೇಶನದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು. ಎಲ್ಲಾ ಕಚೇರಿ, ಇಲಾಖೆಗಳ ಉದ್ಯೋಗಿಗಳ ಆ.7ರ ಹಾಜರುಪಟ್ಟಿಯನ್ನು ಮರುದಿನ ಸಂಜೆ 5 ಗಂಟೆಗೂ ಮೊದಲು ಸರಕಾರಕ್ಕೆ ಸಲ್ಲಿಸಬೇಕು ಎಂದೂ ಆದೇಶದಲ್ಲಿ ತಿಳಿಸುವ ಮೂಲಕ, ಹಾಜರಾತಿಯನ್ನು ಪರೋಕ್ಷವಾಗಿ ಕಡ್ಡಾಯಗೊಳಿಸಲಾಗಿತ್ತು.

 ಈ ಬಗ್ಗೆ ಸರಕಾರಿ ಉದ್ಯೋಗಿಗಳು ದೂರು ನೀಡಿದ್ದರಲ್ಲದೆ ಸ್ಥಳೀಯ ಮಾಧ್ಯಮದಲ್ಲಿ ಈ ಆದೇಶವನ್ನು ಟೀಕಿಸಲಾಗಿತ್ತು. ಇದೀಗ, ಈ ಆದೇಶ ತಪ್ಪು ಸಂದೇಶ ನೀಡುವ ಕಾರಣ ಆದೇಶವನ್ನು ಹಿಂಪಡೆದಿರುವುದಾಗಿ ದಾಮನ್ ಮತ್ತು ದಿಯು ಆಡಳಿತದ ಹಿರಿಯ ಅಧಿಕಾರಿಯೋರ್ವರು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News