ಹುಸಿಯಾದ ಗೂಗಲ್‌ನ ‘ಕನಸಿನ ಉದ್ಯೋಗ’ ಕೊಡುಗೆ!
ಚಂಡಿಗಡ,ಆ.3: ಗೂಗಲ್‌ನಲ್ಲಿ ‘ಕನಸಿನ ಉದ್ಯೋಗ’ದ ಕೊಡುಗೆಯೊಂದಿಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಹರ್ಯಾಣದ ಹದಿಹರೆಯದ ಬಾಲಕನೋರ್ವ ಆ ಸುದ್ದಿ ಹುಸಿಯೆಂದು ಗೊತ್ತಾದ ಬಳಿಕ ತೀವ್ರ ಮಾನಸಿಕ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕುರುಕ್ಷೇತ್ರದ ನಿವಾಸಿ ಹರ್ಷಿತ್ ಶರ್ಮಾ(16)ಗೆ ಕಳೆದ ಜೂನ್‌ನಲ್ಲಿ ಗೂಗಲ್‌ನಿಂದ ದೂರವಾಣಿ ಕರೆಯೊಂದು ಬಂದಿದ್ದು, ಕ್ಯಾಲಿಫೋರ್ನಿಯಾದಲ್ಲಿ ಗ್ರಾಫಿಕ್ ಡಿಸೈನರ್ ಆಗಿ ವೇತನ ಸಹಿತ ಇಂಟರ್ನ್‌ಶಿಪ್‌ನ ಕೊಡುಗೆಯನ್ನು ಮುಂದಿಟ್ಟಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ತರಬೇತಿಯ ಮೊದಲ ಒಂದು ವರ್ಷ ಮಾಸಿಕ 7,900 ಡಾ.ಶಿಷ್ಯವೇತನವನ್ನು ನೀಡಲಾಗುತ್ತದೆ ಮತ್ತು ಬಳಿಕ ಮಾಸಿಕ 23,700 ಡಾ.ವೇತನವನ್ನು ನೀಡಲಾಗುತ್ತದೆ ಎಂದು ಮಾಹಿತಿ-ತಂತ್ರಜ್ಞಾನ ವಿದ್ಯಾರ್ಥಿಯಾಗಿರುವ ಶರ್ಮಾಗೆ ತಿಳಿಸಲಾಗಿದೆ ಎಂದೂ ಅವು ವರದಿ ಮಾಡಿದ್ದವು.
ಇದಕ್ಕೂ ಮುನ್ನ ಹರ್ಷಿತ್, ತಾನು ಕಳೆದ 10 ವರ್ಷಗಳಿಂದಲೂ ವಿನ್ಯಾಸ ರೂಪಿಸುವುದರಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ಬಾಲಿವುಡ್ ಚಿತ್ರಗಳ ಪೋಸ್ಟರ್‌ಗಳಿಗಾಗಿ ವಿನ್ಯಾಸ ರೂಪಿಸುವ ಪೋರ್ಟ್‌ಫೋಲಿಯೊ ಸೃಷ್ಟಿಸಿದ್ದೇನೆ. ಗೂಗಲ್‌ನಲ್ಲಿ ಕೆಲಸ ಮಾಡುವುದು ತನ್ನ ಕನಸಾಗಿದ್ದು, ಕಳೆದ ಮೇ ತಿಂಗಳಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೆ ಮತ್ತು ಆನ್‌ಲೈನ್‌ನಲ್ಲಿ ತನ್ನ ಸಂದರ್ಶನವನ್ನೂ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದ.
ತಾನು ರೂಪಿಸಿದ ಪೋಸ್ಟರ್‌ಗಳ ಆಧಾರದಲ್ಲಿ ತನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಆಗ ಆತ ಕಳೆದ ವಾರ ಹೇಳಿಕೊಂಡಿದ್ದ.
ಉದ್ಯೋಗದ ಕೊಡುಗೆ ಬಂದಾಗ ಹರ್ಷಿತ್ ತುಂಬ ಹರ್ಷಗೊಂಡಿದ್ದ. ತನ್ನಂತಹ ಸಾಮಾನ್ಯ ವಿದ್ಯಾರ್ಥಿಗೆ ಗೂಗಲ್‌ನಲ್ಲಿ ಕೆಲಸ ದೊರೆಯುತ್ತದೆ ಎನ್ನುವುದು ಯಾರಿಗೆ ಗೊತ್ತಿತ್ತು ಎಂದಾತ ಮಾಧ್ಯಮದೊಂದಿಗೆ ಹರ್ಷವನ್ನು ಹಂಚಿಕೊಂಡಿದ್ದ.
ಹರ್ಷಿತ್‌ನನ್ನು ಅಭಿನಂದಿಸಿ ಆತನ ಶಾಲೆಯ ಪ್ರಾಂಶುಪಾಲೆ ಇಂದ್ರಾ ಬೇನಿವಾಲ್ ಶನಿವಾರ ಮಾಧ್ಯಮಗಳಿಗೆ ಪ್ರಕಟಣೆಯನ್ನು ನೀಡಿದ್ದರು. ಆದರೆ ಉದ್ಯೋಗ ಕೊಡುಗೆಯ ಸುದ್ದಿ ಹುಸಿಯೆಂದು ಗೊತ್ತಾದ ಬಳಿಕ ಗೂಗಲ್‌ನಿಂದ ಉದ್ಯೋಗ ನೀಡಿಕೆಯ ಪತ್ರವನ್ನು ತಾನು ನೋಡಿದ್ದನ್ನು ನಿರಾಕರಿಸಿದ್ದಾರೆ.
ಮಾಧ್ಯಮಗಳಲ್ಲಿ ವರದಿಗಳನ್ನು ಓದಿ ಈ ಕೊಡುಗೆ ನಿಜ ಎಂದೇ ಭಾವಿಸಿದ್ದೆ ಎಂದು ಹರ್ಷಿತ್‌ನ ತಾಯಿ ಭಾರತಿ ಹೇಳಿದರು.