ವಿವಾಹ ಘೋಷಣೆ ಪತ್ರದಲ್ಲಿ ‘ಕನ್ಯೆ’ ಪದ ಕೈಬಿಟ್ಟ ಪಾಟ್ನದ ಸಂಸ್ಥೆ

Update: 2017-08-03 15:02 GMT

ಪಾಟ್ನ, ಆ.3: ಪಾಟ್ನದ ಇಂದಿರಾಗಾಂಧಿ ವೈದ್ಯವಿಜ್ಞಾನ ಸಂಸ್ಥೆ (ಐಜಿಐಎಂಎಸ್) ತನ್ನ ಉದ್ಯೋಗಿಗಳಿಗೆ ನೀಡಿದ್ದ ವಿವಾಹ ಘೋಷಣೆ ಪತ್ರದಲ್ಲಿ ನೀಡಲಾಗಿದ್ದ ‘ಕನ್ಯೆ’ ಪದವನ್ನು ಕೈಬಿಟ್ಟಿದೆ.

 ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ನೀಡಿದ್ದ ವಿವಾಹ ಘೋಷಣೆ ಪತ್ರದಲ್ಲಿ - ಸಿಬ್ಬಂದಿಗಳ ಕನ್ಯತ್ವದ ಬಗ್ಗೆ ವಿವರ ಬಯಸಿತ್ತು. ಉದ್ಯೋಗಿಗಳಿಗೆ ನೀಡಲಾಗಿದ್ದ ಅರ್ಜಿ ಫಾರಂನಲ್ಲಿ - ಮದುವೆಯಾಗಿದೆಯೇ, ನಿಮಗೆ ಎಷ್ಟು ಪತ್ನಿಯರಿದ್ದಾರೆ, ನೀವು ಅವಿವಾಹಿತರೇ ಅಥವಾ ವಿಧವೆಯರೇ.. ಇತ್ಯಾದಿ ವಿವರಗಳನ್ನು ಉದ್ಯೋಗಿಗಳು ನೀಡಬೇಕಿತ್ತು. ಈ ಪ್ರಕರಣ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇದೀಗ ಅರ್ಜಿ ಫಾರಂನಲ್ಲಿದ್ದ ‘ಕನ್ಯೆ’ ಪದವನ್ನು ಕೈಬಿಡಲಾಗಿದೆ.

  ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ, ಅವಿವಾಹಿತ ಹುಡುಗಿ ಎಂಬ ಪದ ಆಕ್ಷೇಪಾರ್ಹವಲ್ಲ. ಈ ಪದದ ಅರ್ಥ ಕನ್ಯೆ ಎಂದಾಗಿದೆ. ಆದರೂ ಈ ವಿಷಯವನ್ನು ವಿವಾದ ಮಾಡಲಾಗಿದೆ. ಈ ಬಗ್ಗೆ ಐಜಿಐಎಂಎಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಎಐಐಎಂಎಸ್ ಅರ್ಜಿ ನಮೂನೆಯಲ್ಲಿ 1983ರಿಂದಲೂ ಈ ಪದವನ್ನು ಬಳಸಲಾಗುತ್ತಿದೆ. ದೇಶದ ಪ್ರತಿಯೊಂದು ಸಂಸ್ಥೆಯಲ್ಲೂ ಈ ಪದ ಬಳಕೆಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಜಿಐಎಂಎಸ್‌ನ ವೈದ್ಯಕೀಯ ಅಧೀಕ್ಷಕ ಮನೀಷ್ ಮಂಡಲ್, ಅರ್ಜಿ ಫಾರಂ ನಿಗದಿತ ನಮೂನೆಯಲ್ಲೇ ಇದೆ. ಕನ್ಯೆ ಮತ್ತು ಕನ್ಯತ್ವ- ಈ ಪದಗಳಿಗೆ ವ್ಯತ್ಯಾಸವಿದೆ. ಕನ್ಯೆ ಎಂಬುದು ವೈವಾಹಿಕ ಸ್ಥಿತಿಗೆ ಸಂಬಂಧಿಸಿದ್ದು. ಸಂಸ್ಥೆಗೆ ಸೇರಿದ ಉದ್ಯೋಗಿ ಮೃತಪಟ್ಟಾಗ ಆತನ ವಾರಸುದಾರರು ಯಾರು ಎಂಬುದು ತಿಳಿಯಬೇಕಲ್ಲವೇ. ಸರಕಾರ ಮತ್ತು ಸಂವಿಧಾನ ಕಾನೂನುಗಳನ್ನು ರೂಪಿಸಿದೆ.ಅವರು ಪದಗಳನ್ನು ಬದಲಿಸಿದರೆ ನಾವೂ ಬದಲಿಸುತ್ತೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News