×
Ad

ಪ್ರಣವ್ ದಾ... ನೀವು ನನಗೆ ತಂದೆ ಸಮಾನ: ಮಾಜಿ ರಾಷ್ಟ್ರಪತಿಗೆ ಬರೆದಿದ್ದ ಪತ್ರದಲ್ಲಿ ಮೋದಿ ಶ್ಲಾಘನೆ

Update: 2017-08-03 23:01 IST

ಹೊಸದಿಲ್ಲಿ, ಆ.3: ಪ್ರಣಬ್ ದಾ.. ನಮ್ಮ ರಾಜಕೀಯ ಪ್ರಯಾಣ ಪ್ರತ್ಯೇಕ ರಾಜಕೀಯ ಪಕ್ಷಗಳಿಂದ ಆರಂಭಗೊಂಡಿದೆ. ನಮ್ಮ ಸಿದ್ಧಾಂತಗಳು ಪ್ರತ್ಯೇಕವಾಗಿವೆ. ಆದರೂ ನಿಮ್ಮ ವಿವೇಕ ಮತ್ತು ಮೇಧಾವಿತನದ ಮೇಳೈಸುವಿಕೆಯಿಂದ ನಾವು ಜೊತೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ನೀವು ಎಂದಿಗೂ ನನಗೆ ತಂದೆ ಸಮಾನರು ಹಾಗೂ ಮಾರ್ಗದರ್ಶಿಯಾಗಿದ್ದೀರಿ...

ಇದು ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಅಂತಿಮ ದಿನದ ಕಾರ್ಯನಿರ್ವಹಿಸಿದ ಸಂದರ್ಭ ಪ್ರಧಾನಿ ಮೋದಿ ಕಳುಹಿಸಿಕೊಟ್ಟ ಪತ್ರದ ಸಾರಾಂಶ. ವಿಭಿನ್ನ ರಾಜಕೀಯ ಸಿದ್ಧಾಂತದ ಹಿನ್ನೆಲೆಯುಳ್ಳ ಇಬ್ಬರು ಮುಖಂಡರು ಹೊಂದಿದ್ದ ಗಾಢವಾದ ಅನುಬಂಧವನ್ನು ಈ ಪತ್ರ ಬಿಂಬಿಸುತ್ತದೆ. ಪತ್ರವನ್ನು ಪ್ರಣವ್ ಮುಖರ್ಜಿ ಇಂದು(ಗುರುವಾರ) ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  ಮೂರು ವರ್ಷದ ಹಿಂದೆ ದಿಲ್ಲಿಗೆ ಬಂದಾಗ ನಾನು ಹೊರಗಿನವನಾಗಿದ್ದೆ. ನನ್ನೆದುರು ಇದ್ದ ಕೆಲಸಗಳು ಸವಾಲಿನದ್ದಾಗಿತ್ತು. ಈ ಸಂದರ್ಭದಲ್ಲಿ ತಂದೆಯ ಸ್ಥಾನದಲ್ಲಿ ನಿಂತು ನೀವು ನನಗೆ ಮಾರ್ಗದರ್ಶನ ನೀಡಿದಿರಿ. ನಿಮ್ಮ ವಿವೇಕ, ಮಾರ್ಗದರ್ಶನ ಮತ್ತು ವಾತ್ಸಲ್ಯದ ಭಾವನೆ ನನ್ನಲ್ಲಿ ಆತ್ಮವಿಶ್ವಾಸ ಮತ್ತು ಶಕ್ತಿ ತುಂಬಿದೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

  ವಿವಿಧ ವಿಷಯಗಳಲ್ಲಿ ಪ್ರಣವ್ ಮುಖರ್ಜಿ ಹೊಂದಿದ ಆಳವಾದ ಪರಿಜ್ಞಾನ ವೈಯಕ್ತಿಕವಾಗಿ ತನಗೆ ಮತ್ತು ಸರಕಾರಕ್ಕೆ ನೆರವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದ ಮೋದಿ, ತಾನು ಪಡೆದಿದ್ದನ್ನು ಸಮಾಜಕ್ಕೆ ಸ್ವಾರ್ಥರಹಿತವಾಗಿ ಮರಳಿಸಲು ರಾಜಕೀಯ ಕ್ಷೇತ್ರವು ಪ್ರಣವ್ ಮುಖರ್ಜಿಯವರಿಗೆ ಒಂದು ಸರಳ ಸಾಧನವಾಗಿತ್ತು ಎಂದು ಹೇಳುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.

  ಕರ್ತವ್ಯದ ಸಂದರ್ಭ ಪ್ರವಾಸದಲ್ಲಿದ್ದಾಗ ‘ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡುವಿರೆಂದು ಆಶಿಸುತ್ತೇನೆ’ ಎಂದು ನಿಮ್ಮಿಂದ ಬರುವ ಒಂದು ದೂರವಾಣಿ ಕರೆ ನನ್ನಲ್ಲಿ ಹೊಸ ಉತ್ಸಾಹ, ಹುರುಪನ್ನು ತುಂಬಿಸುತ್ತಿತ್ತು ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.

     ನಿಮ್ಮ ನಿಷ್ಪಕ್ಷಪಾತ ಗುಣ ನಿಮ್ಮನ್ನು ಸಂವಿಧಾನದ ಉನ್ನತ ಹುದ್ದೆಯತ್ತ ಸಾಗಿಸಿತು . ನಿಮ್ಮ ರಾಜಕೀಯ ಪಯಣದ ಹಾಗೂ ರಾಷ್ಟ್ರಪತಿ ಅವಧಿಯಲ್ಲಿ ನೀವು ರಾಷ್ಟ್ರದ ಅಭ್ಯುದಯಕ್ಕೆ ಪ್ರಥಮ ಆದ್ಯತೆ ನೀಡಿದ್ದೀರಿ. ಓರ್ವ ವಿನಯಶೀಲ ಸಾರ್ವಜನಿಕ ಸೇವಕರಾದ ರಾಷ್ಟ್ರಪತಿ ಮತ್ತು ಅಸಾಧಾರಣ ನಾಯಕನಾಗಿ ಭಾರತ ನಿಮ್ಮನ್ನು ಎಂದಿಗೂ ಸ್ಮರಿಸಿಕೊಳ್ಳುತ್ತದೆ ಎಂದು ಪ್ರಧಾನಿ ಪತ್ರದಲ್ಲಿ ಶ್ಲಾಘಿಸಿದ್ದಾರೆ. ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು ಎನ್ನುವ ನಿಮ್ಮ ಪ್ರಜಾಪ್ರಭುತ್ವದ ದೂರದೃಷ್ಠಿ ತನಗೆ ಹಾಗೂ ಇತರರಿಗೆ ನಿರಂತರವಾಗಿ ಶಕ್ತಿ ತುಂಬಲಿದೆ ಎಂದು ಮೋದಿ ತಿಳಿಸಿದ್ದಾರೆ.

  ಮೋದಿ ಪತ್ರದಲ್ಲಿ ಬರೆದ ಈ ಶಬ್ದಗಳು ತನ್ನ ಹೃದಯವನ್ನು ಸ್ಪರ್ಶಿಸಿವೆ ಎಂದು ಪ್ರಣವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News