ಸ್ಮಾರ್ಟ್‌ಸಿಟಿಯಲ್ಲೊಂದು ಕತ್ತಲೆ ಬಡಾವಣೆ!

Update: 2017-08-03 18:13 GMT
ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿರುವ ಆಶ್ರಯ ಬಡಾವಣೆ ಎಚ್-ಬ್ಲಾಕ್‌ನ ಮನೆಗಳು

ಶಿವಮೊಗ್ಗ, ಆ.3: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷವಾಗುತ್ತಾ ಬಂದಿದೆ. ಆದಾಗ್ಯೂ ಅದೆಷ್ಟೋ ಕುಗ್ರಾಮಗಳಿಗೆ ಇಲ್ಲಿಯವರೆಗೆ ವಿದ್ಯುತ್ ಸಂಪರ್ಕವಿಲ್ಲ. ಶಿವಮೊಗ್ಗ ನಗರ, ಪಟ್ಟಣ ಪ್ರದೇಶದ ಲ್ಲಿಯೂ ಕೆಲ ಏರಿಯಾಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿವೆ.

ಹೌದು. ಕೇಂದ್ರ ಸರಕಾರದ ಪ್ರತಿಷ್ಠಿತ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ಮಲೆನಾಡ ನಗರಿ ಶಿವಮೊಗ್ಗದ ಮಹಾನಗರ ಪಾಲಿಕೆ ವಾರ್ಡ್1ರ ಬೊಮ್ಮನಕಟ್ಟೆ ಬಡಾವಣೆಯ ಎಚ್-ಬ್ಲಾಕ್ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ದಿನದೂಡುತ್ತಿದ್ದಾರೆ!

ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಕಳೆದ ಐದು ವರ್ಷಗಳಿಂದ ಬಡ ನಿವಾಸಿಗಳು ಮಹಾನಗರ ಪಾಲಿಕೆ ಆಡಳಿತ ಸೇರಿದಂತೆ ಸರಕಾರಿ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಿರಲಿ, ವಿದ್ಯುತ್ ಪೂರೈಕೆಗೆ ಅಗತ್ಯವಾದ ವಿದ್ಯುತ್ ಕಂಬಗಳನ್ನು ಕೂಡ ಬಡಾವಣೆ ಯಲ್ಲಿ ಹಾಕದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆಯಿಂದ ಮನೆ ಪಡೆದುಕೊಂಡ ಬಡ ಫಲಾನುಭವಿಗಳು ಸಂಕಷ್ಟ ಎದುರಿಸುವಂತಾಗಿದೆ. ವಿದ್ಯುತ್ ಸಂಪರ್ಕಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡು ವಂತಾಗಿದೆ. ಪೂರಕ ಸ್ಪಂದನೆ ಸಿಗದೆ ಬೇಸತ್ತು ಹೋಗಿದ್ದಾರೆ.

ವಿದ್ಯುತ್ ಸಂಪರ್ಕವಿಲ್ಲದೆ ಮಕ್ಕಳು ದೀಪದ ಬೆಳಕಿನ ಸಹಾಯದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವುದು.

ಏನಿದರ ಹಿನ್ನೆಲೆ: ಬೊಮ್ಮನಕಟ್ಟೆ ಬಡಾವಣೆಯ ಎಚ್-ಬ್ಲಾಕ್‌ನಲ್ಲಿ ಆಶ್ರಯ ಯೋಜನೆಯಡಿ ಸುಮಾರು 221 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆ ನಿರ್ಮಾಣಕ್ಕೂ ಮುನ್ನವೇ ಬಡ ವರ್ಗಕ್ಕೆ ಸೇರಿದ ವಸತಿ ರಹಿತ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ನೀಡಲಾಗಿತ್ತು. ಸುಮಾರು ಎರಡ್ಮೂರು ವರ್ಷಗಳ ನಂತರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಆದರೆ ಇಲ್ಲಿಯವರೆಗೂ ಯಾವೊಂದು ಮನೆಗಳಿಗೂ ವಿದ್ಯುತ್ ಸಂಪರ್ಕವೇ ಸಿಕ್ಕಿಲ್ಲ.

ವಿದ್ಯುತ್ ಸಂಪರ್ಕ ವ್ಯವಸ್ಥೆಯಿಲ್ಲದ ಕಾರಣದಿಂದ ಇಂದಿಗೂ ನೂರಾರು ಮನೆಗಳಲ್ಲಿ ಫಲಾನುಭವಿಗಳು ವಾಸಕ್ಕೆ ಬಂದಿಲ್ಲ. ಆದರೆ ಅನಿವಾರ್ಯ ಕಾರಣದಿಂದ ಅದೆಷ್ಟೊ ಫಲಾನುಭವಿಗಳು ವಿದ್ಯುತ್ ಸಂಪರ್ಕವಿಲ್ಲದ ಮನೆಗಳಲ್ಲಿಯೇ ವಾಸಿಸಲಾರಂಭಿಸಿದ್ದಾರೆ. ಕತ್ತಲೆಯಲ್ಲಿಯೇ ದಿನದೂಡುತ್ತಿದ್ದಾರೆ.

‘ಮನೆಗಳು ನಿರ್ಮಾಣವಾಗಿ ಐದು ವರ್ಷವಾಗಿದ್ದರೂ ಜೀವನ ನಡೆಸಲು ಅತ್ಯಂತ ಅಗತ್ಯವಾದ ವಿದ್ಯುತ್ ಸಂಪರ್ಕವನ್ನೇ ಮನೆಗಳಿಗೆ ಕಲ್ಪಿಸಲಾಗಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಹಲವು ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಎಡತಾಕುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನಮ್ಮಂತಹ ಬಡವರ ಗೋಳು ಕೇಳುವವರಾರೂ ಇಲ್ಲದಂತಾಗಿದೆ. ಏನು ಮಾಡಬೇಕೆಂಬುವುದೇ ಗೊತ್ತಾಗುತ್ತಿಲ್ಲ. ವ್ಯವಸ್ಥೆಯ ಬಗ್ಗೆ ಬೇಸರ ಮೂಡುವಂತಾಗಿದೆ’ ಎಂದು ಫಲಾನುಭವಿಯೋರ್ವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಖಾಲಿ ಬಿದ್ದಿರುವ ಕೆಲ ಮನೆಗಳಲ್ಲಿ ಕೆಲವರು ಅನೈತಿಕ ಚಟುವಟಿಕೆಗೆ ಬಳಕೆ ಮಾಡುತ್ತಿರುವ ಮಾಹಿತಿಗಳಿವೆ. ಮತ್ತೆ ಕೆಲ ಮನೆಗಳು ಅಸಮರ್ಪಕ ನಿರ್ವಹಣೆಯಿಂದ ಪಾಳು ಬೀಳುವ ಸ್ಥಿತಿಯಲ್ಲಿವೆ. ವಿದ್ಯುತ್ ಸಂಪರ್ಕ ವ್ಯವಸ್ಥೆಯಿಲ್ಲದ ಕಾರಣದಿಂದ ಅದೆಷ್ಟೋ ಫಲಾನುಭವಿಗಳು ಮನೆ ಮಂಜೂರಾಗಿದ್ದರೂ ಬಾಡಿಗೆ ಮನೆಯಲ್ಲಿಯೇ ಜೀವನ ನಡೆಸುವಂತಾಗಿದೆ’ ಎಂದು ಫಲಾನುಭವಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಮನಹರಿಸಲಿ: ‘ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ, ಜಿಲ್ಲಾಡಳಿತ ನಮ್ಮ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ’ ಎಂದು ಬಡ ಫಲಾನುಭವಿಗಳು ಆಗ್ರಹಿಸಿದ್ದಾರೆ.

‘ಆತಂಕದ ಜೀವನ’

ಬೊಮ್ಮನಕಟ್ಟೆ ಬಡಾವಣೆಯ ಎಚ್-ಬ್ಲಾಕ್ ಹೊರವಲಯದ ಪ್ರದೇಶದಲ್ಲಿದೆ. ರಾತ್ರಿ ವೇಳೆ ಕಳ್ಳಕಾಕರ ಹಾವಳಿಯಿದೆ. ಹಾವು ಮತ್ತಿತರ ವಿಷಜಂತುಗಳ ಕಾಟವೂ ಹೆಚ್ಚಿದೆ. ವಿದ್ಯುತ್ ಇಲ್ಲದ ಕಾರಣದಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲು ಆತಂಕವಾಗುತ್ತದೆ. ಮಕ್ಕಳು ಸೀಮೆಎಣ್ಣೆ ಬುಡ್ಡಿ, ದೀಪದ ಸಹಾಯದಿಂದ ಓದಿಕೊಳ್ಳುವಂತಾಗಿದೆ. ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಸದ್ಯ 221 ಮನೆಗಳಲ್ಲಿ ಸುಮಾರು 20ಕೂ್ಕ ಅಧಿಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದ ಮನೆಗಳು ಖಾಲಿ ಬಿದ್ದಿವೆ’ ಎಂದು ನಿವಾಸಿಯೋರ್ವರು ಹೇಳಿದ್ದಾರೆ.

‘60 ಲಕ್ಷ ರೂ. ಮೀಸಲಿಡಲಾಗಿದೆ’
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಎಚ್-ಬ್ಲಾಕ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಆಶ್ರಯ ವಿಭಾಗದ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮೆಸ್ಕಾಂ ಅಧಿಕಾರಿಗಳ ಜೊತೆಯೂ ಸಮಾಲೋಚನೆ ನಡೆಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು 60 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ 70 ಲಕ್ಷ ರೂ. ಅಗತ್ಯವಿದೆ. ಬಾಕಿ 10 ಲಕ್ಷ ರೂ. ಹೊಂದಾಣಿಕೆ ಮಾಡುವ ಕೆಲಸ ನಡೆಸಲಾಗುತ್ತಿದೆ. ಕಾಲಮಿತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಮೇಯರ್ ಎನ್. ಏಳುಮಲೈ ಮಾಹಿತಿ ನೀಡಿದ್ದಾರೆ.

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News