×
Ad

ಪಾಕ್ ಸಚಿವ ಸಂಪುಟ ಪ್ರಮಾಣ ವಚನ; ಖ್ವಾಜ ಆಸಿಫ್ ವಿದೇಶ ಸಚಿವ

Update: 2017-08-04 18:50 IST

ಇಸ್ಲಮಾಬಾದ್, ಆ.4: ಪಾಕಿಸ್ತಾನದ ನೂತನ ಪ್ರಧಾನಿ ಶಹೀದ್ ಖಾಖನ್ ಅಬ್ಬಾಸಿ ಅವರು ಸರಕಾರದ ಸಚಿವ ಸಂಪುಟವನ್ನು ರಚಿಸಿದ್ದು ಖ್ವಾಜ ಆಸಿಫ್ ನೂತನ ವಿದೇಶ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2013ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಚಿವ ಸಂಪುಟ ಪೂರ್ಣಪ್ರಮಾಣದ ವಿದೇಶ ಸಚಿವರನ್ನು ಹೊಂದಿದಂತಾಗಿದೆ.

ಇಸ್ಲಮಾಬಾದ್‌ನಲ್ಲಿರುವ ಅಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಾಕ್ ಅಧ್ಯಕ್ಷ ಮಮ್ನೂನ್ ಹುಸೈನ್ 28 ಫೆಡರಲ್ ಸಚಿವರು ಹಾಗೂ 18 ರಾಜ್ಯ ಸಚಿವರಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು. ನವಾಝ್ ಶರೀಫ್ ಸಂಪುಟದಲ್ಲಿದ್ದ ಬಹುತೇಕರನ್ನು ಉಳಿಸಿಕೊಳ್ಳಲಾಗಿದ್ದು ಕೆಲವು ಹೊಸಬರನ್ನು ಸೇರಿಸಿಕೊಳ್ಳಲಾಗಿದೆ. ತನ್ನ ಪೂರ್ವಾಧಿಕಾರಿ ಶರೀಫ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಶಹಬಾಝ್ ಶರೀಫ್ ಅವರೊಂದಿಗೆ ಸಮಾಲೋಚಿಸಿದ ಬಳಿಕ ನೂತನ ಸಚಿವರಿಗೆ ಖಾತೆಯನ್ನು ಹಂಚಲಾಗಿದೆ.

ಶರೀಫ್ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಆಸಿಫ್, ನೂತನ ವಿದೇಶ ವ್ಯವಹಾರ ಸಚಿವರಾಗಿರುತ್ತಾರೆ. 2013ರಲ್ಲಿ ಪಿಎಂಎಲ್-ಎನ್ ಪಕ್ಷ ಅಧಿಕಾರದಲ್ಲಿದ್ದಾಗ ಹಿನಾ ರಬ್ಬಾನಿ ಖಾರ್ ವಿದೇಶ ವ್ಯವಹಾರ ಸಚಿವರಾಗಿದ್ದರು. ಆ ಬಳಿಕ ಪಾಕಿಸ್ತಾನ ಪೂರ್ಣಪ್ರಮಾಣದ ವಿದೇಶ ವ್ಯವಹಾರ ಸಚಿವರನ್ನು ಹೊಂದಿರಲಿಲ್ಲ. ಅಹ್ಸಾನ್ ಇಕ್ಬಾಲ್‌ಗೆ ಮಹತ್ವದ ಗೃಹ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಶರೀಫ್ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಪ್ರಭಾವಶಾಲಿ ಮುಖಂಡ ನಿಸಾರ್ ಆಲಿ ಖಾನ್ ಪಕ್ಷದ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕಾರಣ ನೂತನ ಸಂಪುಟದಲ್ಲಿ ಸೇರ್ಪಡೆಗೊಳ್ಳಲು ನಿರಾಕರಿಸಿದ್ದಾರೆ.

ಮಾಹಿತಿ (ರಾಜ್ಯ)ಸಚಿವರಾಗಿ ಮರ್ರಿಯಂ ಔರಂಗಝೇಬ್ ಅವರೇ ಮುಂದುವರಿಯಲಿದ್ದಾರೆ. ಇಶಾಖ್ ದಾರ್ ವಿತ್ತ ಸಚಿವರಾಗಿ ಮುಂದುವರಿಯಲಿದ್ದರೆ, ಖುರ್ರಂ ದಸ್ತಗೀರ್ ಖಾನ್ ರಕ್ಷಣಾ ಸಚಿವರಾಗಿರುತ್ತಾರೆ. ಪರ್ವೇಝ್ ಮಲಿಕ್ ವಾಣಿಜ್ಯ ಸಚಿವರಾಗಿ ನೇಮಕಗೊಂಡಿದ್ದಾರೆ. ‘ಪನಾಮಾ ಪೇಪರ್ಸ್’ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಜುಲೈ 28ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನವಾಝ್ ಶರೀಫ್ ಸರಕಾರಿ ನಿವಾಸವನ್ನು ತೊರೆದಿದ್ದು ರೆಸಾರ್ಟ್ ನಗರ ಮುರ್ರೀ ಎಂಬಲ್ಲಿ ತಂಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News