×
Ad

ವಿಶ್ವಾಸಕ್ಕೂ, ಸಂಯಮಕ್ಕೂ ಒಂದು ಮಿತಿಯಿದೆ: ಚೀನಾ

Update: 2017-08-04 19:00 IST

ಬೀಜಿಂಗ್, ಆ.4: ಸಿಕ್ಕಿಂ ಗಡಿ ಭಾಗದಲ್ಲಿ ಭಾರತದೊಂದಿಗೆ ಎದುರಾಗಿರುವ ಬಿಕ್ಕಟ್ಟಿನ ವಿಷಯದಲ್ಲಿ ತಾನು ಇದುವರೆಗೆ ಅತ್ಯಂತ ಮಿತ್ರಭಾವದ ವರ್ತನೆ ತೋರಿದ್ದು ವಿಶ್ವಾಸಕ್ಕೂ ಒಂದು ನೀತಿಯಿದೆ. ಸಂಯಮಕ್ಕೂ ಒಂದು ಮಿತಿಯಿದೆ ಎಂದು ಚೀನಾ ಎಚ್ಚರಿಸಿದೆ.

    ಚೀನಾದ ಜೊತೆಗಿನ ದ್ವಿಪಕ್ಷೀಯ ಸಂಬಂಧ ಸುಗಮವಾಗಿ ಮುಂದುವರಿಯಲು ಭಾರತ-ಚೀನಾ ಗಡಿಪ್ರದೇಶದಲ್ಲಿ ನೆಮ್ಮದಿ ಮತ್ತು ಶಾಂತಿಯ ಪರಿಸ್ಥಿತಿ ನೆಲೆಸುವ ಅಗತ್ಯವಿದೆ ಎಂಬುದು ಭಾರತದ ಅಭಿಪ್ರಾಯವಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆ ಗುರುವಾರ ನೀಡಿದ ಹೇಳಿಕೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ. ಭಾರತವು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ತಕ್ಕ ಕ್ರಮವನ್ನು ತ್ವರಿತವಾಗಿ ಕೈಗೊಂಡು ಗಡಿಪ್ರದೇಶದಲ್ಲಿ ನೆಮ್ಮದಿ ಮತ್ತು ಶಾಂತಿಯ ಪರಿಸ್ಥಿತಿ ಮರಳಿ ಸ್ಥಾಪಿಸಲು ಮುಂದಾಗಬೇಕು ಎಂದು ಚೀನಾದ ರಕ್ಷಣಾ ಇಲಾಖೆಯ ವಕ್ತಾರ ರೆನ್ ಗುವೊಕಿಯಂಗ್ ಹೇಳಿದ್ದಾರೆ.

  ಸಿಕ್ಕಿಂ ಬಿಕ್ಕಟ್ಟು ಆರಂಭವಾದಂದಿನಿಂದ ಚೀನಾವು ರಾಜತಾಂತ್ರಿಕ ಮಾರ್ಗದಿಂದ ಬಿಕ್ಕಟ್ಟು ಪರಿಹರಿಸಲು ಭಾರತದೊಡನೆ ಅತ್ಯಂತ ವಿಶ್ವಸನೀಯ ರೀತಿಯಲ್ಲಿ ವ್ಯವಹರಿಸಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವ ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗದ ಉದ್ದೇಶದಿಂದ ಚೀನಾದ ಸಶಸ್ತ್ರ ಪಡೆಗಳೂ ಅತ್ಯಂತ ಸಂಯಮದಿಂದ ವರ್ತಿಸಿದ್ದವು . ಆದರೆ ವಿಶ್ವಾಸಕ್ಕೂ ಒಂದು ನೀತಿಯಿದೆ ಮತ್ತು ಸಂಯಮಕ್ಕೂ ಒಂದು ಮಿತಿಯಿದೆ ಎಂದು ರೆನ್ ಗುವೊಕಿಯಂಗ್ ಹೇಳಿರುವುದಾಗಿ ಸರಕಾರಿ ನಿಯಂತ್ರಣದ ‘ಕ್ಸಿನ್‌ಹುವ ’ ಸುದ್ದಿಸಂಸ್ಥೆಯಲ್ಲಿ ವರದಿಯಾಗಿದೆ.

  ಚೀನಾದ ತಾಕತ್ತನ್ನು ಯಾವುದೇ ರಾಷ್ಟ್ರ ಕೀಳಂದಾಜಿಸುವುದು ಬೇಡ ಎಂದು ಎಚ್ಚರಿಸಿದ ಅವರು , ವಿಳಂಬ ಧೋರಣೆ ಅನುಸರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬ ಭ್ರಮೆ ಯನ್ನು ಭಾರತ ಬಿಟ್ಟುಬಿಡಬೇಕು . ಚೀನಾದ ಸಶಸ್ತ್ರ ಪಡೆಗಳು ದೇಶದ ಪ್ರಾದೇಶಿಕ ಸಾರ್ವಭೌಮತೆ ಮತ್ತು ಭದ್ರತಾ ಹಿತಾಸಕ್ತಿಯ ರಕ್ಷಣೆಗೆ ಕಂಕಣಬದ್ಧವಾಗಿವೆ ಎಂದಿದ್ದಾರೆ.

  ಉಭಯ ದೇಶಗಳೂ ತಮ್ಮ ಸೇನೆಯನ್ನು ಡೋಕಾ ಲಾ ದಿಂದ ಹಿಂದೆಗೆದರೆ ಸಿಕ್ಕಿಂ ಬಿಕ್ಕಟ್ಟಿಗೆ ಒಂದು ಶಾಂತಿಯುತ ಪರಿಹಾರ ಹುಡುಕಲು ಪೂರಕವಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಭಾರತದ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಕಳೆದ ತಿಂಗಳು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News