×
Ad

ಅಮೆರಿಕ: ಅಪರಿಚಿತರಿಂದ ಮಸೀದಿಯ ಮೇಲೆ ಬಾಂಬ್ ದಾಳಿ

Update: 2017-08-06 20:53 IST

ಮಿನಿಯಾಪೊಲಿಸ್,ಆ.6: ಅಮೆರಿಕದ ಮಿನಿಯಾಪೊಲೀಸ್ ನಗರದ ಮಸೀದಿಯಲ್ಲಿ ಶನಿವಾರ ಮುಂಜಾನೆ ಅಪರಿಚಿತರು ಬಾಂಬ್ ದಾಳಿ ನಡೆಸಿದ್ದು, ಅಲ್ಲಿ ಬೆಳಗ್ಗಿನ ಪ್ರಾರ್ಥನೆಗಾಗಿ ಆಗಮಿಸಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಮಿನಿಯಾಪೊಲಿಸ್‌ನ ಹೊರವಲಯದಲ್ಲಿರುವ ದಾರ್ ಅಲ್ ಫರೂಕ್ ಮಸೀದಿಯಲ್ಲಿ ಸ್ಥಳೀಯ ಕಾಲಮಾನ ಶನಿವಾರ ಮುಂಜಾನೆ 5:05 ಗಂಟೆಯ ವೇಳೆಗೆ ಇಮಾಮ್ ಅವರ ಕಚೇರಿಯ ಕಿಟಿಕಿಯೊಳಗೆ ದುಷ್ಕರ್ಮಿಗಳು ಬಾಂಬೆಸೆದು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

 ಘಟನೆಗೆ ಸಂಬಂಧಿಸಿ ಅಮೆರಿಕದ ಫೆಡರಲ್ ತನಿಖಾ ದಳ (ಎಫ್‌ಬಿಐ)ದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಮಿನಿಯಾಪೊಲಿಸ್ ನಗರದ ಮಸೀದಿಗೆ ಬಾಂಬ್ ಎಸೆದವರ ಬಂಧನಕ್ಕೆ ಕಾರಣವಾಗುವಂತಹ ಸುಳಿವು ನೀಡಿದವರಿಗೆ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕನ್-ಇಸ್ಲಾಮಿಕ್ ಬಾಂಧವ್ಯಗಳ ಮಂಡಳಿಯು ಘೋಷಿಸಿದೆ.

ಸ್ಫೋಟ ಸಂಭವಿಸಿದ ಬೆನ್ನಲ್ಲೇ ಮಸೀದಿಯ ಹೊರಗಿನ ವಾಹನ ಪಾರ್ಕಿಂಗ್ ಸ್ಥಳದಿಂದ ಪಿಕ್‌ಅಪ್ ಟ್ರಕ್ಕೊಂದು ವೇಗವಾಗಿ ಹೊರಹೋದುದನ್ನು ಮಸೀದಿಗೆ ಆಗಮಿಸಿದ್ದವರು ಕಂಡಿದ್ದಾರೆಂದು ಮಸೀದಿಯ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ಉಮರ್ ತಿಳಿಸಿದ್ದಾರೆ.

ವಿಧ್ವಂಸಕಾರಿಯಾದ ಸ್ಫೋಟಕ ಸಾಧನದ ಮೂಲಕ ಈ ಸ್ಫೋಟವನ್ನು ನಡೆಸಲಾಗಿದೆಯೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಎಫ್‌ಬಿಐನ ಮಿನಿಯಾಪೊಲಿಸ್ ವಿಭಾಗವು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಪ್ರಕರಣದ ತನಿಖೆಯಲ್ಲಿ ಎಫ್‌ಬಿಐ ಜೊತೆ ಮದ್ಯ,ತಂಬಾಕು ಹಾಗೂ ಶಸ್ತ್ರಾಸ್ತ್ರ ನಿಯಂತ್ರಣ ಇಲಾಖೆಯೂ ಕೈಜೋಡಿಸಿದೆಯೆಂದು ಬ್ಲೂಮಿಗ್‌ಟನ್ ಪೊಲೀಸ್ ಇಲಾಖೆ ತಿಳಿಸಿದೆ.

      ಸ್ಫೋಟದಿಂದಾಗಿ ಮಸೀದಿಯ ಕಟ್ಟಡಕ್ಕೆ ಹಾನಿಯಾಗಿದೆಯಾದರೂ ಯಾರಿಗೂ ಗಾಯಗಳಾಗಿಲ್ಲವೆಂದು ಪೊಲೀಸ್ ವರಿಷ್ಠ ಜೆಫ್ ಪಾಟ್ಸ್ ತಿಳಿಸಿದ್ದಾರೆ. ಮಸೀದಿಯ ಮೇಲೆ ನಡೆದ ಬಾಂಬ್ ದಾಳಿಯನ್ನು ಖಂಡಿಸಿ ಮಿನಿಯಾಪೊಲೀಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದವರ ಜೊತೆಗೆ ಇತರ ಧಾರ್ಮಿಕ ನಾಯಕರು ಪಾಲ್ಗೊಂಡಿದ್ದರು. ಮಿನೆಸೊಟಾ ರಾಜ್ಯದ ಚರ್ಚ್‌ಗಳ ಕಾರ್ಯಕಾರಿ ನಿರ್ದೇಶಕ ಕ್ಯುರ್ಟಿಸ್ ಯಂಗ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಇಂತಹ ದಾಳಿಗಳಿಗೆ ಒಳಗಾಗುತ್ತಿರುವ ಇಡೀ ಅಮೆರಿಕದ ಮುಸ್ಲಿಮರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.

ಮುಸ್ಲಿಮರ ಮೇಲೆ ದಾಳಿ ಘಟನೆಗಳಲ್ಲಿ ಶೇ.57ಷ್ಟು ಏರಿಕೆ

 ಕಳೆದ ವರ್ಷ ಅಮೆರಿಕದಲ್ಲಿ 2213 ಮುಸ್ಲಿಂ ವಿರೋಧಿ ಘಟನೆಗಳು ನಡೆದಿದ್ದು ಇಂದು 2015ರಲ್ಲಿದ್ದುದಕ್ಕಿಂತ ಶೇ. 57ರಷ್ಟು ಅಧಿಕವೆಂದು ಅಮೆರಿಕನ್-ಇಸ್ಲಾಮಿಕ್ ಬಾಂಧವ್ಯ ಮಂಡಳಿ ಈ ವರ್ಷದ ಮೇನಲ್ಲಿ ಪ್ರಕಟಿಸಿದ ವಿಶ್ಲೇಷಣಾ ವರದಿಯೊಂದರಲ್ಲಿ ತಿಳಿಸಿದೆ. ಮಿನಿಯಾಪೊಲಿಸ್ ನಗರದ ಮಸೀದಿಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕದ ಎಲ್ಲಾ ಮಸೀದಿಗಳು ತಮ್ಮ ಭದ್ರತೆಯನ್ನು ಹೆಚ್ಚಿಸಬೇಕೆಂದು ಅದು ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News