‘ನಾನು ಅದೃಷ್ಟವಂತೆ,ನನ್ನ ಮೇಲೆ ಅತ್ಯಾಚಾರ ನಡೆಯಲಿಲ್ಲ’
ಚಂಡಿಗಡ,ಆ.6: ‘ನಾನು ಅದೃಷ್ಟವಂತೆ, ನನ್ನ ಮೇಲೆ ಅತ್ಯಾಚಾರ ನಡೆಯಲಿಲ್ಲ’ ಹೀಗೆಂದು ಶುಕ್ರವಾರ ತಡರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾರ ಪುತ್ರ ವಿಕಾಸ್ ಬರಾಲಾ ಮತ್ತು ಆತನ ಸ್ನೇಹಿತ ಆಶಿಷ್ ಅವರಿಂದ ಹಿಂಬಾಲಿಸಲ್ಪಟ್ಟು ಸಂಭಾವ್ಯ ಅಪಹರಣದಿಂದ ಪಾರಾಗಿರುವ ರಾಜ್ಯ ಸರಕಾರದ ಹಿರಿಯ ಅಧಿಕಾರಿ ಯೋರ್ವರ ಪುತ್ರಿ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಬರಹ.
ಶುಕ್ರವಾರ ರಾತ್ರಿ ಯುವತಿ ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಆರೋಪಿಗಳು ಟಾಟಾ ಸಫಾರಿಯಲ್ಲಿ ಆಕೆಯನ್ನು ಹಿಂಬಾಲಿಸಿದ್ದರು. ಇದನ್ನು ಗಮನಿಸಿದ ಯುವತಿ ವೇಗವಾಗಿ ಕಾರನ್ನು ಚಲಾಯಿಸಿದ್ದು, ಪಾನಮತ್ತರಾಗಿದ್ದ ಆರೋಪಿಗಳು ಒಂದೆರಡು ಬಾರಿ ತಮ್ಮ ಕಾರನ್ನು ಡಿಕ್ಕಿ ಹೊಡೆಯುವಷ್ಟು ಸಮೀಪಕ್ಕೆ ತಂದಿದ್ದರು. ಯುವತಿ ಕಾರು ಚಲಾಯಿಸುತ್ತಲೇ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಳು. ಸಂಪೂರ್ಣ ಭೀತಳಾಗಿದ್ದ ಯುವತಿ ನಡುಗುತ್ತಿದ್ದ ಕೈಗಳಿಂದಲೇ ಕಾರಿನ ಸ್ಟಿಯರಿಂಗ್ ನಿಯಂತ್ರಿಸಿದ್ದಳು. ಪೊಲೀಸರು ಬರುತ್ತಾರೋ ಇಲ್ಲವೋ ಎನ್ನುವುದು ಆಕೆಗೆ ಗೊತ್ತಿರಲಿಲ್ಲ. ಹೀಗಾಗಿ ಆಕೆಗೆ ಅಂದು ರಾತ್ರಿ ತಾನು ಮನೆ ತಲುಪುವ ವಿಶ್ವಾಸವೇ ಇರಲಿಲ್ಲ. ದುಷ್ಕರ್ಮಿಗಳು ಎರಡು ಬಾರಿ ಆಕೆಯ ಕಾರನ್ನೂ ಅಡ್ಡಗಟ್ಟಿದ್ದರಾದರೂ ಯುವತಿ ಕೆಳಗಿಳಿಯದೆ ಕಾರನ್ನು ನುಗ್ಗಿಸಿಕೊಂಡು ಮುಂದಕ್ಕೆ ಸಾಗಿದ್ದಳು.
ಪೊಲೀಸರು ಕೊನೆಗೂ ಆಕೆಯನ್ನು ರಕ್ಷಿಸಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವ ವಿಕಾಸ ಮತ್ತು ಆಶಿಷ್‌ರನ್ನು ಬಂಧಿಸಿ, ಬಳಿಕ ಜಾಮೀನಿನಲ್ಲಿ ಬಿಡುಗಡೆಯನ್ನೂ ಮಾಡಲಾಗಿದೆ.
ಶ್ರೀಸಾಮಾನ್ಯನ ಮಗಳಾಗಿ ಜನಿಸದಿದ್ದುದು ನನ್ನ ಅದೃಷ್ಟವೆಂಬಂತೆ ಕಂಡು ಬರುತ್ತದೆ, ಏಕೆಂದರೆ ಇಂತಹ ವಿಐಪಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲು ಅವರಿಗೆ ಸಾಧ್ಯ? ನನ್ನ ಮೇಲೆ ಅತ್ಯಾಚಾರವೆಸಗಿ ಕೊಂದು ಎಲ್ಲೋ ಎಸೆಯಲಿಲ್ಲ, ಆ ವಿಷಯದಲ್ಲಿಯೂ ನಾನು ಅದೃಷ್ಟವಂತೆ ಎಂದಿರುವ ಆಕೆ, ಆರೋಪಿಗಳಿಬ್ಬರು ರಾಜಕೀಯ ನಂಟು ಹೊಂದಿರುವ ಪ್ರಭಾವಿ ಕುಟುಂಬಗಳಿಗೆ ಸೇರಿದವರು ಎನ್ನುವುದನ್ನು ಬೆಟ್ಟು ಮಾಡಿದ್ದಾಳೆ.
ಆರೋಪಿಗಳ ವಿರುದ್ಧ ಜಾಮೀನು ರಹಿತ ಅಪಹರಣ ಆರೋಪವನ್ನೇಕೆ ಹೊರಿಸಿಲ್ಲ ಎಂಬ ಪ್ರಶ್ನೆಗೆ, ಹಿರಿಯ ಪೊಲೀಸ್ ಅಧಿಕಾರಿ ಸತೀಶ ಕುಮಾರ್ ಅವರು, ಯುವತಿಯ ದೂರಿನಲ್ಲಿ ಅಪಹರಣ ಪ್ರಯತ್ನವನ್ನು ಉಲ್ಲೇಖಿಸಿಲ್ಲ. ಹೀಗಾಗಿ ನಾವು ಈ ಆರೋಪವನ್ನು ಸೇರಿಸಿಲ್ಲ ಎಂದು ಉತ್ತರಿಸಿದರು. ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಅವರು ಒತ್ತಿ ಹೇಳಿದರು.
ಆಡಳಿತ ಬಿಜೆಪಿಯ ವಿರುದ್ಧ ದಾಳಿಗಿಳಿದಿರುವ ಪ್ರತಿಪಕ್ಷಗಳು ಸುಭಾಷ್ ಬರಾಲಾರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿವೆ. ಇದು ಬರಾಲಾರ ವಿಷಯವಲ್ಲ.ಇದು ವ್ಯಕ್ತಿಗತ ವಿಷಯ ಮತ್ತು ಕಾನೂನು ತನ್ನ ದಾರಿಯಲ್ಲಿ ಸಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಪ್ರತಿಕ್ರಿಯಿಸಿದ್ದಾರೆ.