ಶಬೀರ್ ಶಾ ಪಿಎಂಎಲ್‌ಎ ಪ್ರಕರಣ: ಅಸ್ಲಂ ವಾನಿಯನ್ನು ಆ. 14ರವರೆಗೆ ಇಡಿ ಕಸ್ಟಡಿಗೆ ನೀಡಿದ ಕೋರ್ಟ್
ಹೊಸದಿಲ್ಲಿ, ಆ. 6: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾಹ್ ಭಾಗಿಯಾಗಿದ್ದ ಕಪ್ಪು ಹಣ ಬಿಳುಪು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಹವಾಲಾ ವ್ಯಾಪಾರಿ ಮುಹಮ್ಮದ್ ಅಸ್ಲಂ ವಾನಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಆ. 14ರ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಬಿಟ್ಟುಕೊಟ್ಟಿದೆ.
ವಾನಿಯನ್ನು ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ ಬಂಧಿಸಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಮುಂದೆ ಹಾಜರುಪಡಿಸಿತ್ತು. ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ನ್ಯಾಯಾಲಯ ವಾನಿಯನ್ನು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಕಸ್ಟಡಿಯಲ್ಲಿರುವ ಶಾನ ಎದುರು ನಿಲ್ಲಿಸಿ ವಿಚಾರಣೆ ನಡೆಸಲು ವಾನಿಯ ಅಗತ್ಯತೆ ಇದೆ ಎಂದು ಜಾರಿ ನಿರ್ದೇಶನಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಕೆ. ಮೆಹ್ತಾ ಇಂದು ನ್ಯಾಯಾಲಯಕ್ಕೆ ತಿಳಿಸಿದರು.
ಶಾನ ವಿಚಾರಣೆ ಸಂದರ್ಭ ಹೊಸ ಮಾಹಿತಿಗಳು ಬಹಿರಂಗಗೊಳ್ಳಬಹುದು ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್, ವಾನಿಯನ್ನು 16 ದಿನಗಳ ಕಾಲ ಕಸ್ಟಡಿಗೆ ಕೋರಿದರು.
ರಾಜ್ಯ ಪೊಲೀಸರ ನೆರವಿನಿಂದ ಜಾರಿ ನಿರ್ದೇಶನಾಲಯವು ವಾನಿಯನ್ನು ಶ್ರೀನಗರದಲ್ಲಿ ಬಂಧಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.