×
Ad

ಸಿಖ್ಖರು ದ್ವೇಷಾಪರಾಧಗಳ ಪ್ರಧಾನ ಗುರಿ

Update: 2017-08-07 20:02 IST

ವಾಶಿಂಗ್ಟನ್, ಆ. 7: ಅಮೆರಿಕದಲ್ಲಿ ನಡೆಯುತ್ತಿರುವ ದ್ವೇಷಾಪರಾಧಗಳು ಮತ್ತು ವಿಭಜನವಾದಿ ಹಿಂಸೆಯ ಬಲಿಪಶುಗಳ ಪೈಕಿ ಸಿಖ್ಖರು ಅಗ್ರ ಸ್ಥಾನದಲ್ಲಿದ್ದಾರೆ ಎಂದು ಸಿಖ್ ನಾಯಕರು ಹೇಳಿದ್ದಾರೆ.

2012ರಲ್ಲಿ ವಿಸ್ಕೋನ್ಸಿನ್ ನಗರದ ಗುರುದ್ವಾರದಲ್ಲಿ, ಬಿಳಿ ಚರ್ಮದವರು ಶ್ರೇಷ್ಠರು ಎಂಬ ಸಿದ್ಧಾಂತದ ಪ್ರತಿಪಾದಕನೊಬ್ಬ ನಡೆಸಿದ ಹತ್ಯಾಕಾಂಡದ ವಾರ್ಷಿಕ ದಿನದ ಸಂದರ್ಭದಲ್ಲಿ ರವಿವಾರ ಅವರು ಮಾತನಾಡುತ್ತಿದ್ದರು.

ಐದು ವರ್ಷಗಳ ಹಿಂದೆ ನಡೆದ ಹತ್ಯಾಕಾಂಡದಲ್ಲಿ ಆರು ಸಿಖ್ಖರು ಹತರಾಗಿದ್ದರು.

ಹಲವಾರು ಖ್ಯಾತ ಸಿಖ್-ಅಮೆರಿಕನ್ನರು, ಸಂಸದರು, ಸರಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

‘‘ದೇಶಾದ್ಯಂತವಿರುವ ನಮ್ಮ ಎಲ್ಲ ಗುರುದ್ವಾರ ಸಾಹಿಬ್‌ಗಳನ್ನು ರಕ್ಷಿಸಲು ನಾವು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಹಾಗೂ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೆ, ಈಗಲೂ ಸಿಖ್ಖರು ದ್ವೇಷಾಪರಾಧಗಳು, ವಿಭಜನವಾದಿ ಹಿಂಸೆ ಮತ್ತು ಅಮೆರಿಕದ ಶಾಲೆಗಳಲ್ಲಿ ನಡೆಯುತ್ತಿರುವ ಪೀಡನೆಯ ಬಲಿಪಶುಗಳಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಾಳಿಗಳು ಹಲವು ಪಟ್ಟು ಹೆಚ್ಚಿವೆ’’ ಸಿಖ್ಸ್ ರಾಜಕೀಯ ಕ್ರಿಯಾ ಸಮಿತಿಯ ಮುಖ್ಯಸ್ಥ ಗುರಿಂದರ್ ಸಿಂಗ್ ಖಾಲ್ಸಾ ಹೇಳಿದರು.

ಗುರುದ್ವಾರದಲ್ಲಿ ನಡೆದ ಸಮಾರಂಭದಲ್ಲಿ ಓಕ್ ಕ್ರೀಕ್ ಪೊಲೀಸ್ ಠಾಣೆಯ ನಿವೃತ್ತ ಅಧಿಕಾರಿ ಬ್ರಯಾನ್ ಮರ್ಫಿ ಭಾಗವಹಿಸಿದ್ದರು. ಈ ದಾಳಿಯಲ್ಲಿ ದಾಳಿಕೋರನು ಹತನಾಗುವ ಮುನ್ನ ಅವರ ಮೇಲೆ ದಾಳಿಕೋರನು 15 ಗುಂಡುಗಳನ್ನು ಹಾರಿಸಿದ್ದನು.

 ಅಂದಿನ ಘಟನೆಯನ್ನು ನೆನಪಿಸಿಕೊಂಡ ಮರ್ಫಿ, ‘‘ಅಂದು ಪ್ರಾಣ ಕಳೆದುಕೊಂಡ ಜನರ ಕೂಗು ಈಗಲೂ ಕೇಳಿಸುತ್ತಿದೆ. 2012 ಆಗಸ್ಟ್ 5 ಹಲವರ ಬದುಕನ್ನು ಶಾಶ್ವತವಾಗಿ ಬದಲಾಯಿಸಿತು. ಆದರೆ, ಆಗಸ್ಟ್ 4ರಂದು ಹಾಗೂ ಅದಕ್ಕಿಂತ ಮೊದಲು ಇಲ್ಲಿದ್ದ ಜನರನ್ನು ನೆನಪಿಸಿಕೊಳ್ಳಿ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News