ಅತ್ಯಂತ ಪ್ರತಿಷ್ಠೆಯ ಹೋರಾಟದ ರೂಪ ತಳೆದ ಗುಜರಾತ್ ರಾಜ್ಯಸಭಾ ಚುನಾವಣೆ
ಅಹ್ಮದಾಬಾದ್,ಆ.7: ಮಂಗಳವಾರ ನಡೆಯಲಿರುವ ಗುಜರಾತ್ ರಾಜ್ಯಸಭಾ ಚುನಾವಣೆಯು ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಹೋರಾಟವಾಗಿ ಪರಿಣಮಿಸಿದೆ.
ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯದಿಂದ ಮೇಲ್ಮನೆಗೆ ನಡೆಯಲಿರುವ ಚುನಾವಣೆಯು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿಯವರ ಸ್ಪರ್ಧೆ ಹಾಗೂ ಕಾಂಗ್ರೆಸ್ ತನ್ನ ಹಿರಿಯ ನಾಯಕ ಅಹ್ಮದ್ ಪಟೇಲ್‌ರನ್ನು ಕಣಕ್ಕಿಳಿಸುವುದರೊಂದಿಗೆ ಭಾರೀ ಗಮನವನ್ನು ಸೆಳೆದಿದೆ. ಹಿರಿಯ ನಾಯಕ ಶಂಕರಸಿಂಹ್ ವೇಲಾರಿಂದ ಕಾಂಗ್ರೆಸ್‌ನಲ್ಲಿ ಬಂಡಾಯ, ಪಕ್ಷದ ಆರು ಶಾಸಕರ ರಾಜೀನಾಮೆ ಮತ್ತು ಬಿಜೆಪಿಯಿಂದ ‘ಕುದುರೆ ವ್ಯಾಪಾರ’ದ ಪ್ರಯತ್ನಗಳಿಂದ ರಕ್ಷಿಸಿಕೊಳ್ಳಲು ಬೆಂಗಳೂರಿಗೆ 44 ಶಾಸಕರ ಸ್ಥಳಾಂತರ ಸೇರಿದಂತೆ ನಾಟಕೀಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಚುನಾವಣಾ ಕದನ ಏರ್ಪಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಯಾಗಿರುವ ಪಟೇಲ್‌ಗೆ ಗೆಲ್ಲಲು 45 ಮತಗಳು ಅಗತ್ಯವಾಗಿವೆ. ಪಕ್ಷವು ಸದ್ಯ 44 ಶಾಸಕರ ಬೆಂಬಲವನ್ನು ಹೊಂದಿದ್ದು, ಕಳೆದೊಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಬೆಂಗಳೂರು ಬಳಿಯ ರೆಸಾರ್ಟ್‌ನಲ್ಲಿ ಮೊಕ್ಕಾಂ ಹೂಡಿದ್ದ ಅವರೆಲ್ಲ ಸೋಮವಾರ ತವರು ರಾಜ್ಯಕ್ಕೆ ಮರಳಿದ್ದು, ಅವರನ್ನು ಆನಂದ್ ಜಿಲ್ಲೆಯ ರೆಸಾರ್ಟ್‌ವೊಂದರಲ್ಲಿ ಇರಿಸಲಾಗಿದೆ.
ಈ ಶಾಸಕರ ಪೈಕಿ ಯಾರೊಬ್ಬರೂ ಅಡ್ಡ ಮತದಾನ ಮಾಡದಿದ್ದರೂ ಅಥವಾ ನೋಟಾ ಆಯ್ಕೆಯನ್ನು ಬಳಸದಿದ್ದರೂ ಪಟೇಲ್‌ಗೆ ಗೆಲ್ಲಲು ಒಂದು ಹೆಚ್ಚುವರಿ ಮತ ಅಗತ್ಯವಾಗಿದೆ.
ಮೇಲ್ಮನೆಯ ಮೂರು ಸ್ಥಾನಗಳಿಗಾಗಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾ ಮತ್ತು ಇರಾನಿ ಜೊತೆಗೆ ಇತ್ತೀಚಿಗೆ ಕಾಂಗ್ರೆಸ್ ತೊರೆದು ಆಡಳಿತ ಪಕ್ಷವನ್ನು ಸೇರಿರುವ ಬಲವಂತಸಿಂಹ್ ರಾಜಪೂತ್ ಅವರೂ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯ ಗೆಲುವಿಗಾಗಿ ಇಬ್ಬರು ಎನ್‌ಸಿಪಿ ಶಾಸಕರು ಹಾಗೂ ಜೆಡಿಯು ಮತ್ತು ಗುಜರಾತ ಪರಿವರ್ತನ್ ಪಾರ್ಟಿಯ ತಲಾ ಓರ್ವರು ಶಾಸಕರ ಬೆಂಬಲವನ್ನು ನೆಚ್ಚಿಕೊಂಡಿದೆ.
ಆದರೆ, ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂದು ತನ್ನ ಪಕ್ಷವು ಈವರೆಗೂ ನಿರ್ಧರಿಸಿಲ್ಲ ಎಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ರವಿವಾರ ಹೇಳಿದ್ದರು.
ಅಹ್ಮದ್ ಪಟೇಲ್ ಅವರು ತನ್ನ ನಾಮಪತ್ರ ಸಲ್ಲಿಸುವಾಗ ಎನ್‌ಸಿಪಿ ಮತ್ತು ಜೆಡಿಯು ಶಾಸಕರು ಅವರ ಜೊತೆಯಲ್ಲಿದ್ದರು ಎನ್ನುವುದು ಗಮನಾರ್ಹವಾಗಿದೆ.
ತನ್ನ ಮತಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡುವವರಿಗೆ ಮಾತ್ರ ತಾನು ಬೆಂಬಲಿಸುವುದಾಗಿ ಜೆಡಿಯು ಶಾಸಕ ಛೋಟುಭಾಯಿ ವಸಾವಾ ಹೇಳುತ್ತಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ತನ್ನ 51 ಶಾಸಕರ ಪೈಕಿ ಬೆಂಗಳೂರಿಗೆ ಹೋಗದಿದ್ದ ಮತ್ತು ವೇಲಾ ಪಾಳಯದ ನಿಕಟವರ್ತಿಗಳೆನ್ನಲಾದ ಏಳು ಶಾಸಕರ ಪೈಕಿ ಕೆಲವರ ಬೆಂಬಲವನ್ನು ಮರಳಿ ಪಡೆಯುವ ಆಶಯವನ್ನೂ ಕಾಂಗ್ರೆಸ್ ಹೊಂದಿದೆ. ಇವರಲ್ಲಿ ವೇಲಾ ಕೂಡ ಸೇರಿದ್ದಾರೆ.
ವೇಲಾ ಪಕ್ಷವನ್ನು ತೊರೆಯುವ ಮುನ್ನ ಕಾಂಗ್ರೆಸ್ ಪಕ್ಷವು 182 ಸದಸ್ಯ ಬಲದ ವಿಧಾನ ಸಭೆಯಲ್ಲಿ 57 ಶಾಸಕರನ್ನು ಹೊಂದಿತ್ತು. ಬಳಿಕ ಆರು ಶಾಸಕರು ರಾಜೀನಾಮೆ ನೀಡುವ ಮೂಲಕ ಪಕ್ಷದ ಬಲ 51ಕ್ಕೆ ಕುಸಿದಿದ್ದರೆ, ಇದರ ಫಲವಾಗಿ ಸದನದ ಪರಿಣಾಮಕಾರಿ ಬಲವೂ 176ಕ್ಕಿಳಿದಿದೆ.
ಅಭ್ಯರ್ಥಿಯೋರ್ವ ಗೆಲ್ಲಬೇಕಾದರೆ ಒಟ್ಟು ಮತಗಳ ನಾಲ್ಕನೇ ಒಂದು ಭಾಗ ಮತ್ತು ಒಂದು ಹೆಚ್ಚುವರಿ ಮತ ಪಡೆಯಬೇಕಾಗುತ್ತದೆ. ಅಂದರೆ ಗೆಲ್ಲಲು ಕನಿಷ್ಠ 45 ಮತಗಳು ಅಗತ್ಯವಾಗಿವೆ.
121 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಹುದು. ಆದರೆ ಅದರ ಮೂರನೇ ಅಭ್ಯರ್ಥಿಯ ಪಾಲಿಗೆ ಕೇವಲ 31 ಮತಗಳು ಉಳಿಯಲಿದ್ದು, 14 ಮತಗಳ ಕೊರತೆಯನ್ನು ಎದುರಿಸುತ್ತಿದೆ.