×
Ad

ರಶ್ಯದ ಪ್ರತೀಕಾರಕ್ಕೆ ಅಮೆರಿಕದ ಪ್ರತಿಕ್ರಿಯೆ ಸೆ. 1ರೊಳಗೆ: ರೆಕ್ಸ್ ಟಿಲರ್‌ಸನ್

Update: 2017-08-07 20:54 IST

ಮನಿಲಾ (ಫಿಲಿಪ್ಪೀನ್ಸ್), ಆ. 7: ನೂರಾರು ಅಮೆರಿಕನ್ ರಾಜತಾಂತ್ರಿಕರನ್ನು ಉಚ್ಚಾಟಿಸುವ ರಶ್ಯದ ನಿರ್ಧಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಇನ್ನಷ್ಟೇ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಿದೆ, ಆದರೆ, ಸೆಪ್ಟಂಬರ್ 1ರ ಒಳಗೆ ಅದು ತನ್ನ ಪ್ರತಿಕ್ರಿಯೆಯನ್ನು ರಶ್ಯಕ್ಕೆ ತಿಳಿಸಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಸೋಮವಾರ ಹೇಳಿದ್ದಾರೆ.

2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕದ ಕಾಂಗ್ರೆಸ್ ರಶ್ಯದ ವಿರುದ್ಧ ಕಳೆದ ತಿಂಗಳು ಆರ್ಥಿಕ ದಿಗ್ಬಂಧನ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿರುವ ರಶ್ಯ, ತನ್ನ ದೇಶದಲ್ಲಿರುವ ಅಮೆರಿಕದ ನೂರಾರು ರಾಜತಾಂತ್ರಿಕರು ಸೆಪ್ಟಂಬರ್ ಒಂದರ ಒಳಗೆ ದೇಶ ತೊರೆಯುವಂತೆ ಸೂಚಿಸಿದೆ.

ರಶ್ಯದ ಪ್ರತೀಕಾರದ ನಿರ್ಧಾರಕ್ಕೆ ಸಂಬಂಧಿಸಿ ಹಲವು ವಿಷಯಗಳಲ್ಲಿ ಸ್ಪಷ್ಟೀಕರಣ ಕೋರಿರುವುದಾಗಿ ಫಿಲಿಪ್ಪೀನ್ಸ್‌ನಲ್ಲಿ ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್ ಜೊತೆ ಮಾತುಕತೆ ನಡೆಸಿದ ಒಂದು ದಿನದ ಬಳಿಕ ಟಿಲರ್‌ಸನ್ ತಿಳಿಸಿದರು.

ರಶ್ಯದ ಈ ಪ್ರತೀಕಾರದ ಕ್ರಮವು ರಶ್ಯದಲ್ಲಿ ಅಮೆರಿಕದ ರಾಜತಾಂತ್ರಿಕ ಉಪಸ್ಥಿತಿಯ ಮೇಲೆ ಹಾಗೂ ಪರಮಾಣು ಶಕ್ತ ದೇಶಗಳ ನಡುವಿನ ಈಗಾಗಲೇ ಹದಗೆಟ್ಟಿರುವ ಸಂಬಂಧದ ಮೇಲೆ ಯಾವ ಪರಿಣಾಮವನ್ನು ಬೀರುವುದು ಎಂಬುದನ್ನು ಅರಿಯಲು ಅಮೆರಿಕ ಪ್ರಸಕ್ತ ಹೆಣಗುತ್ತಿದೆ.

ಅದೇ ವೇಳೆ, ಉತ್ತರ ಕೊರಿಯ, ಸಿರಿಯ, ಯುಕ್ರೇನ್ ಹಾಗೂ ಇತರ ವಿಷಯಗಳ ಬಗ್ಗೆ ಅಮೆರಿಕದೊಂದಿಗೆ ಹೆಚ್ಚಿನ ಮಾತುಕತೆ ನಡೆಸಲು ರಶ್ಯ ಸಿದ್ಧವಿದೆ ಎಂಬುದಾಗಿ ರಶ್ಯದ ವಿದೇಶ ಸಚಿವರ ಘೋಷಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಟಿಲರ್‌ಸನ್, ಕೆಲವು ವಿಷಯಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳಿರುವ ಹೊರತಾಗಿಯೂ ಅಮೆರಿಕ ಮತ್ತು ರಶ್ಯಗಳು ಗಂಭೀರ ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ಮಾತನಾಡಬೇಕಾದ ಅಗತ್ಯವಿದೆ ಎಂದರು.

‘‘ಒಂದೇ ಒಂದು ವಿಷಯಕ್ಕೆ ಸಂಬಂಧಿಸಿ ಎಲ್ಲವನ್ನೂ ಕಡಿದುಕೊಳ್ಳುವುದು ಉಪಯೋಗಕ್ಕೆ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ’’ ಎಂದು ಟಿಲರ್‌ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News