ನಗರಸಭೆ ಖಾತೆ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ: ಸಚಿವ ಖಂಡ್ರೆ ಭರವಸೆ

Update: 2017-08-08 17:24 GMT

ಪುತ್ತೂರು, ಆ.8: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿನ ಜಮೀನು ಖಾತೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೌರಾಡಳಿತ ಖಾತೆಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಅವರು ಮಂಗಳವಾರ ಮುಸ್ಸಂಜೆ ಹೊತ್ತಿಗೆ ಪುತ್ತೂರು ನಗರಸಭೆಗೆ ಭೇಟಿ ನೀಡಿ ಶಾಸಕರು, ನಗರಸಭಾ ಅಧ್ಯಕ್ಷರು ಹಾಗೂ ಉಪವಿಭಾಗಾಧಿಕಾರಿಗಳನ್ನು ಮುಂದಿರಿಸಿ ಸಭೆ ನಡೆಸಿ ಈ ಭರವಸೆ ನೀಡಿದರು. ನಗರಸಭೆಯಲ್ಲಿ ಉಂಟಾಗಿರುವ ಖಾತೆಯ ಸಮಸ್ಯೆ ತನ್ನ ಗಮನಕ್ಕೆ ಬಂದಿದೆ. ಖಾತೆಗೆ ಸಂಬಂಧಸಿ ಅಧಿಕಾರಿಗಳು ನೀಡಿರುವ ಆದೇಶಗಳಲ್ಲಿ ಗೊಂದಲ, ಸಮಸ್ಯೆಗಳಿದ್ದಲ್ಲಿ ನಗರ ಸಭೆಯ ವತಿಯಿಂದ ವಿಸ್ತ್ರತ ವರದಿಯನ್ನು ಪಡೆದು ಅದನ್ನು ಪರಿಶೀಲನೆ ನಡೆಸಲಾಗುವುದು ಹಾಗೂ ಪರಿಹಾರದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಂಗಲ್ ಲೇಔಟ್ ಪದ್ಧತಿಯನ್ನು ಉತ್ತಮ ಉದ್ದೇಶಕ್ಕಾಗಿಯೇ ಜಾರಿಗೊಳಿಸಲಾಗಿದೆ. ನಗರಗಳ ಅಭಿವೃದ್ಧಿ, ರಸ್ತೆ ವಿಸ್ತರಣೆ, ಮೂಲ ಸೌಕರ್ಯ ಕಲ್ಪಿಸಲು ಸ್ಥಳಾವಕಾಶ ಸಿಗದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಆದರೆ ಸಿಂಗಲ್ ಲೇಔಟ್ ಮಾಡದೆ ಖಾತೆ ನೀಡುತ್ತಿಲ್ಲ ಎಂಬ ಕಾರಣದಿಂದ ಜನರ ಬ್ಯಾಂಕ್ ಲೋನ್ ಮತ್ತಿತರ ಸೌಕರ್ಯಕ್ಕೆ ಸಮಸ್ಯೆ ಆಗುತ್ತಿದ್ದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕಿ ಶಕುಂತಳಾ ಶೆಟ್ಟಿ ಮತ್ತು ನಗರಸಭೆ ಆಡಳಿತ ಮಂಡಳಿಯ ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಅವರು ಖಾತೆಯ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸುವಂತೆ ತಿಳಿಸಿದರು. 50 ಸೆಂಟ್ಸ್ ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ಜಮೀನಿಗೆ ಬಡಾವಣೆ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಮಹಮ್ಮದ್ ಆಲಿ ವಿನಂತಿಸಿದರು. ರಾಜ್ಯ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ಖಾಲಿ ನಿವೇಶನಗಳ ಉಲ್ಲೇಖ ಮಾತ್ರವೇ ಇದ್ದರೂ, ಜಿಲ್ಲಾ ಯೋಜನಾ ನಿರ್ದೇಶಕರು ಮಾತ್ರ ಕಟ್ಟಡ ಇರುವ ನಿವೇಶನಗಳು ಎಂಬ ಶಬ್ದ ಸೇರಿಸಿ ಗೊಂದಲ ಮೂಡಿಸಿದ್ದಾರೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.

ಏಕ ವಿನ್ಯಾಸ ಇಲ್ಲದೆ ಖಾತೆ ಕೊಡುತ್ತಿಲ್ಲ. ಖಾತೆ ಇಲ್ಲದೆ ಲೋನ್ ಕೂಡ ಸಿಗುತ್ತಿಲ್ಲ ಎಂದು ಎಂಜಿನಿಯರ್ಸ್‌ ಎಸೋಸಿಯೇಶನ್ ಅಧ್ಯಕ್ಷ ಶಂಕರ ಭಟ್ ಹೇಳಿದರು. ಬಿಜೆಪಿಯ ಕೌನ್ಸಿಲರ್ ಬಾಲಚಂದ್ರ, ಕಾಂಗ್ರೆಸ್ ಮುಖಂಡ ಇಸಾಕ್ ಸಾಲ್ಮರ ಮುಂತಾದವರು ಸಮಸ್ಯೆಯ ಬಗ್ಗೆ ವಿವರಿಸಿದರು.
ನಗರಸಭಾ ಸದಸ್ಯ ರಾಮಣ್ಣ ಗೌಡ ಹಲಂಗ ಅವರು, ಬನ್ನೂರು ಡಂಪಿಂಗ್ ಯಾರ್ಡ್ ಅವ್ಯವಸ್ಥೆಯ ಬಗ್ಗೆ ದೂರಿಕೊಂಡರು. ಯಾರ್ಡ್‌ಗೆ ಭೇಟಿ ಕೊಟ್ಟು ಅಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ವಿಧಾನಗಳ ಬಗ್ಗೆ ವರದಿ ಕೊಡಿ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಸಚಿವರು ಉಪ ವಿಭಾಗಾಧಿಕಾರಿ ಡಾ.ರಘುನಂದನ ಮೂರ್ತಿ ಅವರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News