ಓಲಾ ಉಬರ್ ಆನ್ ಲೈನ್ ಟ್ಯಾಕ್ಸಿ ಅಪರೇಟರುಗಳಿಂದ ಮುಷ್ಕರ

Update: 2017-08-08 18:16 GMT

ಮಂಗಳೂರು, ಆ. 8: ಆ್ಯಪ್ ಆಧಾರಿತ ಟ್ಯಾಕ್ಸಿ ಅಪರೇಟರುಗಳಿಗೆ ಓಲಾ ಮತ್ತು ಉಬರ್ ಕಂಪೆನಿಗಳು ದರಗಳಲ್ಲಿ ಭಾರೀ ಇಳಿಕೆ ಮತ್ತು ಇತರ ಭತ್ಯೆಗಳನ್ನು ಭಾರೀ ಕಡಿತ ಮಾಡಿರುವುದರಿಂದ ಅಪರೇಟರುಗಳು ತೀವ್ರ ನಷ್ಟ ಅನುಭವಿಸುತ್ತಿದ್ದು ಕಂಪೆನಿಗಳು ಅಪರೇಟರುಗಳಿಗೆ ನೀಡಲಾಗುವ ದರಗಳಲ್ಲಿ ಬದಲಾವಣೆ ಮಾಡದೆ ಹಠಮಾರಿ ಧೋರಣೆ ತಳೆದಿರುವುದನ್ನು ವಿರೋಧಿಸಿ ಆ್ಯಪ್ ಆಧಾರಿತ ಟ್ಯಾಕ್ಸಿ ಅಪರೇಟರುಗಳು ಆನ್ ಲೈನ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿ  ಓಲಾ ಮತ್ತು ಉಬರ್ ಕಂಪೆನಿಗಳ ವಿರುದ್ಧ  ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಇಂದು ನಗರದ ಸರ್ಕಾರಿ ನೌಕರರ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಡ್ರೈವರ್ಸ್ ಆ್ಯಂಡ್ ಓನರ್ಸ್ ಎಸೋಸಿಯೇಶನ್ ನೇತ್ರತ್ವದಲ್ಲಿ ಜರಗಿದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅವರು ಪ್ರಯಾಣಿಕರಿಗೆ ಕೊಡುಗೆಗಳನ್ನು ನೀಡಲಿಕ್ಕಾಗಿ ಓಲಾ ಮತ್ತು ಉಬರ್ ಕಂಪೆನಿಗಳು ಅಪರೇಟರುಗಳ ರಕ್ತ ಹೀರುತ್ತಿದೆ. ಸರಿಯಾದ ದರಗಳನ್ನು ಪಡೆಯಲಾಗದೆ ಅಪರೇಟರುಗಳ ಕುಟುಂಬ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ಬ್ಯಾಂಕುಗಳಿಂದ ಸಾಲ ಮರುಪಾವತಿ ಮಾಡಲಾಗದೆ ಕಾರುಗಳು ಜಪ್ತಿಗೊಳಗಾಗುತ್ತಿದ್ದರೂ ಕಂಪೆನಿಗಳು ಹಠಮಾರಿ ಧೋರಣೆ ತಳೆಯುತ್ತಿರುವುದು ಖಂಡನೀಯ ಎಂದರು.

ವಾರಕ್ಕೊಮ್ಮೆ ಬದಲಾವಣೆ ಆಗುವ ದರ ನೀತಿಗಳು ಅಪರೇಟರುಗಳಿಗೆ ಮಾರಕವಾಗಿದೆ. ಟ್ರಿಪ್ ಗಳನ್ನು 100% ರಷ್ಟು ಹೆಚ್ಚಳ ಮಾಡಿ ದರಗಳಲ್ಲಿ 200% ಇಳಿಕೆ ಮಾಡಿರುವುದು ಕಂಪೆನಿಯ ಲಾಭಕೋರತನ ಎಂದು ಬಿ.ಕೆ ಇಮ್ತಿಯಾಝ್ ಟೀಕಿಸಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಗರಾಜ ರೈ ಮಾತನಾಡುತ್ತಾ ಕಂಪೆನಿಯ ಮುಂದೆ ಅಂಗಲಾಚಿ ಬೇಡಿದರೂ ಕಂಪೆನಿಗಳು ಮಾತ್ರ ನಮ್ಮನ್ನು ಜೀತಗಳಂತೆ ದುಡಿಸುತ್ತಿವೆ ಹೋರಾಟ ಮಾತ್ರ ನಮ್ಮಲ್ಲಿರುವ ಅಸ್ತ್ರ. ಇಂದಿನಿಂದ ನಮ್ಮ ಬೇಡಿಕೆ ಈಡೇರುವ ವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದರು.

ಸಂಘದ ಪದಾಧಿಕಾರಿಗಳಾದ ಸಾದಿಕ್ ಕಣ್ಣೂರು, ಹೇಮಂತ ಕೊಡಕ್ಕಲ್, ಮುನವ್ವರ್ ಆಲಿ, ಸತ್ಯೇಂದ್ರ ಶೆಟ್ಟಿ, ನೆಲ್ಸನ್ ಸೆರಾವೊ, ಸಲ್ಮಾನ್, ಶಾಕಿರ್, ಅರವಿಂದ ಭಟ್, ಅಬೂಬಕರ್, ಜಲೀಲ್ ಮುಷ್ಕರದ ನೇತ್ರತ್ವ ವಹಿಸಿದ್ದು, ಆ.9ರಂದು ಬೆಳಗ್ಗೆ ಓಲಾ ಮತ್ತು ಉಬರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News