ಚೀನಾ ಭೂಕಂಪ: 19 ಸಾವು; 247ಕ್ಕೂ ಅಧಿಕ ಮಂದಿಗೆ ಗಾಯ
ಬೀಜಿಂಗ್, ಆ. 8: ಚೀನಾದ ಸಿಚುವಾನ್ ಪ್ರಾಂತದಲ್ಲಿ ಮಂಗಳವಾರ ರಾತ್ರಿ ನಡೆದ ಭೂಕಂಪದಲ್ಲಿ ಆರು ಪ್ರವಾಸಿಗಳು ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ ಹಾಗೂ 247 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರಕಾರ ಮತ್ತು ಅಧಿಕೃತ ಮಾಧ್ಯಮ ಬುಧವಾರ ತಿಳಿಸಿವೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7ರಷ್ಟಿತ್ತು.
ಗುವಾಂಗ್‌ಯುವಾನ್ ನಗರದಿಂದ 200 ಕಿ.ಮೀ. ವಾಯುವ್ಯದಲ್ಲಿರುವ ವಿರಳ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ.
ಸಿಚುವಾನ್‌ನಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ. 2008ರಲ್ಲಿ ಅಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 70,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಬುಧವಾರ ಬೆಳಗ್ಗೆ ಚೀನಾದ ವಾಯುವ್ಯ ತುದಿಯಲ್ಲಿರುವ ಕ್ಸಿನ್‌ಜಿಯಾಂಗ್ ಪ್ರದೇಶದ ದುರ್ಗಮ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 6.6ರ ತೀವ್ರತೆಯ ಭೂಕಂಪ ಸಂಭವಿಸಿದೆ.
ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲೇ ಸಂಭವಿಸಿದ ಭೂಕಂಪದಲ್ಲಿ 32 ಮಂದಿ ಗಾಯಗೊಂಡಿದ್ದಾರೆ ಎಂದು ‘ಪೀಪಲ್ಸ್ ಡೇಲಿ’ ಪತ್ರಿಕೆ ವರದಿ ಮಾಡಿದೆ.