ನಾವು ಉತ್ತರಾಖಂಡ ಅಥವಾ ಕಾಶ್ಮೀರದೊಳಗೆ ಪ್ರವೇಶಿಸಿದರೆ ನೀವೇನು ಮಾಡುತ್ತಿದ್ದಿರಿ ?
ಬೀಜಿಂಗ್, ಆ.9: ಡೋಕಾ ಲಾದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಣೆಗೆ ಉಭಯ ದೇಶಗಳೂ ತಮ್ಮ ಸೈನಿಕರನ್ನು ಏಕಕಾಲಕ್ಕೆ ಹಿಂಪಡೆಯಬೇಕು ಎಂಬ ಭಾರತದ ಸಲಹೆಯನ್ನು ತಿರಸ್ಕರಿಸಿರುವ ಚೀನಾ, ಒಂದು ವೇಳೆ ತಾನು ಉತ್ತರಾಖಂಡದ ಕಾಲಾಪಾನಿ ಪ್ರದೇಶ ಅಥವಾ ಕಾಶ್ಮೀರದೊಳಗೆ ಪ್ರವೇಶಿಸಿದರೆ ಭಾರತ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದೆ.
ಡೋಕಾ ಲಾದಲ್ಲಿ ಒಬ್ಬ ಭಾರತೀಯ ಯೋಧ, ಕೇವಲ ಒಂದು ದಿನ ಇದ್ದರೂ ಅದು ನಮ್ಮ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗುತ್ತದೆ ಎಂದು ಚೀನಾದ ವಿದೇಶ ವ್ಯವಹಾರ ಸಚಿವಾಲಯದ ಗಡಿ ಮತ್ತು ಸಮುದ್ರ ವ್ಯವಹಾರ ವಿಭಾಗದ ಸಹಾಯಕ ಪ್ರಧಾನ ನಿರ್ದೇಶಕ ವಾಂಗ್ ವೆನ್ಲಿ ಹೇಳಿದ್ದಾರೆ.
ಚೀನಾದ ಸರಕಾರಿ ನಿಯಂತ್ರಣದ ‘ಅಖಿಲ ಚೀನಾ ಪತ್ರಕರ್ತರ ಸಂಘ’ದ ಆಹ್ವಾನದ ಮೇರೆಗೆ ಬೀಜಿಂಗ್‌ಗೆ ಭೇಟಿ ನೀಡಿರುವ ಭಾರತೀಯ ಪತ್ರಕರ್ತರ ನಿಯೋಗದ ಜೊತೆ ಡೋಕಾ ಲಾ ವಿಷಯದ ಕುರಿತು ಮಾತನಾಡಿದ ವೆನ್ಲಿ , ಈ ಸಂದರ್ಭದಲ್ಲಿ ಭಾರತದ ಜೊತೆ ಮಾತುಕತೆ ಸಾಧ್ಯವಿಲ್ಲ. ಹೀಗೆ ಮಾಡಿದರೆ ನಮ್ಮ ಸರಕಾರ ಅಸಮರ್ಥ ಎಂದು ಜನತೆ ಭಾವಿಸಿಯಾರು ಎಂದು ಹೇಳಿದರು.
ಭಾರತೀಯ ಪಡೆಗಳು ಚೀನಾದ ಪ್ರದೇಶದಿಂದ ಹಿಂದೆ ಸರಿಯುವವರೆಗೆ ಭಾರತದೊಂದಿಗೆ ವಾಸ್ತವಿಕ ಮಾತುಕತೆ ಸಾಧ್ಯವಿಲ್ಲ . ಡೋಕಾ ಲಾ ದಿಂದ ಭಾರತೀಯ ಪಡೆಗಳು ಹಿಂದಕ್ಕೆ ಸರಿಯುವುದು ಈ ಸಮಸ್ಯೆ ಪರಿಹಾರಕ್ಕೆ ಇರುವ ಏಕೈಕ ಮಾರ್ಗ ಎಂದವರು ಹೇಳಿದರು.
ತನಗೆ ಸೇರಿದ ಪ್ರದೇಶದಲ್ಲಿ ರಸ್ತೆ ನಿರ್ಮಿಸುವಾಗ ಭಾರತ ತಡೆದಿದೆ. ಭಾರತ ವಿವಾದಾಸ್ಪದ ಡೋಕಾ ಲಾ ಪ್ರದೇಶದಿಂದ ತಕ್ಷಣ ಸೇನೆಯನ್ನು ಹಿಂಪಡೆಯಬೇಕು ಎಂದು ಚೀನಾ ಹೇಳುತ್ತಿದೆ. ಡೋಕಾ ಲಾ ಪ್ರದೇಶ ತನಗೆ ಸೇರಿದ್ದೆಂದು ಭೂತಾನ್ ಹೇಳುತ್ತಿದೆ. ಆದರೆ ಚೀನಾ ಇದನ್ನು ತಿರಸ್ಕರಿಸಿದ್ದು ಭೂತಾನ್‌ಗೂ ಇಲ್ಲಿ ಯಾವುದೇ ಹಕ್ಕು ಇಲ್ಲ ಎಂದು ಹೇಳುತ್ತಿದೆ.
ಡೋಕಾ ಲಾ ಬಿಕ್ಕಟ್ಟು ಗಂಭೀರವಲ್ಲ: ದಲಾಯಿ ಲಾಮ
ಭಾರತ- ಚೀನಾ ನೆರೆಹೊರೆಯ ದೇಶಗಳಾಗಿದ್ದು, ಡೋಕಾ ಲಾ ಬಿಕ್ಕಟ್ಟು ಗಂಭೀರ ಸಮಸ್ಯೆಯಲ್ಲ ಎಂದು ದಲಾಯಿ ಲಾಮ ಹೇಳಿದ್ದಾರೆ.
ಎರಡೂ ರಾಷ್ಟ್ರಗಳು ಒರಟು ಭಾಷೆ ಪ್ರಯೋಗಿಸಿದ್ದ ದಿನಗಳಿದ್ದವು. ಆದರೆ ‘ಹಿಂದಿ-ಚೀನಿ ಭಾಯಿ ಭಾಯಿ’ ಎಂಬ ಮನೋಭಾವದೊಂದಿಗೆ ಈಗ ಮುಂದುವರಿಯ ಬೇಕಿದೆ. ಭಾರತ- ಚೀನಾ ನೆರೆಹೊರೆಯ ದೇಶಗಳು ಎಂದ ಅವರು, ಈ ವಿಷಯಕ್ಕೆ ಹೆಚ್ಚು ಪ್ರಚಾರ ನೀಡಿದರೆ ವಿಷಯ ಇನ್ನಷ್ಟು ಜಟಿಲಗೊಳ್ಳುತ್ತದೆ ಎಂದು ಹೇಳಿದರು.
‘ಭಾರತೀಯ ಸಂಪಾದಕರ ಸಂಘ’ದ ಆಶ್ರಯದಲ್ಲಿ ನಡೆದ ರಾಜೇಂದ್ರ ಮಾಥುರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1962ರಲ್ಲಿ ಕೂಡಾ, ಬೊಮ್ಡಿಲ್ಲಾದವರೆಗೆ ಬಂದಿದ್ದ ಚೀನಾದ ಸೇನೆಯನ್ನು ಅಂತಿಮವಾಗಿ ಹಿಂಪಡೆಯಲಾಗಿತ್ತು ಎಂದು ಹೇಳಿದರು.