ಅಹ್ಮದ್ ಪಟೇಲ್ ಅಭಿನಂದಿಸಿದ ಶರದ್ ಯಾದವ್

Update: 2017-08-09 17:35 GMT

ಹೊಸದಿಲ್ಲಿ, ಆ.9: ಗುಜರಾತ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ಬಳಿಕ ಗೆಲುವು ಸಾಧಿಸಿದ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರನ್ನು ಅಭಿನಂದಿಸಿ ಜೆಡಿಯು ಮುಖಂಡ ಶರದ್ ಯಾದವ್ ಕಳುಹಿಸಿದ ಟ್ವೀಟ್ ಸಂದೇಶ ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ.

   ಕಠಿಣ ಅಡೆತಡೆ ಇದ್ದಾಗ್ಯೂ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಹೃದಯಾಂತರಾಳದ ಅಭಿನಂದನೆಗಳು.ನಿಮಗೆ ಶ್ರೇಯಸ್ಸು ಸಿಗಲೆಂದು ಹಾರೈಸುತ್ತೇನೆ ಎಂದು ಶರದ್ ಯಾದವ್, ಇಬ್ಬರೂ ಜೊತೆಗಿರುವ ಫೋಟೋ ಸಹಿತ ಟ್ವಿಟರ್ ಸಂದೇಶ ರವಾನಿಸಿದ್ದಾರೆ.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಮೈತ್ರಿ ಮುರಿದುಕೊಂಡು ಬಿಜೆಪಿ ಜೊತೆ ಮೈತ್ರಿ ಸಾಧಿಸಿರುವುದು ಶರದ್‌ಗೆ ಅಸಮಾಧಾನ ಉಂಟುಮಾಡಿದ್ದು, ಇದಾದ ಬಳಿಕ ವಿಪಕ್ಷ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರುವ ಯಾದವ್ ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.

 ಈ ಮಧ್ಯೆ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ , ಮಹಾಮೈತ್ರಿ ರಚನೆಯಲ್ಲಿ ಶರದ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು. ಆದ್ದರಿಂದ ಅವರಿಗೆ ಅಸಮಾಧಾನ ಆಗಿರುವುದು ಸಹಜವೇ ಎಂದು ನುಡಿದರು. ಬಿಜೆಪಿ ಜೊತೆ ಮೈತ್ರಿಯ ವಿಷಯದಲ್ಲಿ ಶರದ್ ಯಾದವ್ ಮತ್ತು ನಿತೀಶ್ ಮಧ್ಯೆ ಭಿನ್ನಾಭಿಪ್ರಾಯವಿದೆ. ಅದೇನಿದ್ದರೂ ಆಗಸ್ಟ್ 18 ಮತ್ತು 19ರಂದು ಪಾಟ್ನದಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಲಿದ್ದು ಆಗ ಎಲ್ಲವೂ ಸರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಗುಜರಾತ್‌ನಲ್ಲಿ ಜೆಡಿಯು ಪಕ್ಷದ ಏಕೈಕ ಶಾಸಕರಾಗಿರುವ ಛೋಟು ವಾಸವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಖಚಿತಪಡಿಸಿಕೊಳ್ಳಲು ಸ್ವತಃ ನಿತೀಶ್ ಕುಮಾರ್ ಅವರೇ ಮುನ್ನೆಚ್ಚರಿಕೆ ವಹಿಸಿದ್ದರು. ಅಲ್ಲದೆ ಪೋಲಿಂಗ್ ಏಜೆಂಟರನ್ನು ನೇಮಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಅವರು ಅಧಿಕೃತ ವ್ಯಕ್ತಿ ಎಂದು ಚುನಾವಣಾಧಿಕಾರಿಗೆ ಪತ್ರವನ್ನೂ ಬರೆದಿದ್ದರು. ಹೀಗಿದ್ದರೂ ತಾನು ಅಹ್ಮದ್ ಪಟೇಲ್‌ಗೆ ಮತ ಹಾಕಿರುವುದಾಗಿ ವಾಸವ ಹೇಳಿಕೊಂಡಿದ್ದಾರೆ.

ಜೆಡಿಯು ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾಸ್ತವ್ ಪಕ್ಷದ ಪರ ವೋಟಿಂಗ್ ಏಜೆಂಟರನ್ನು ನೇಮಿಸುವ ಮೂಲಕ ನಿತೀಶ್ ಸೂಚನೆಯನ್ನು ಧಿಕ್ಕರಿಸಿದ್ದರು. ಈ ಕಾರಣಕ್ಕೆ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಶ್ರೀವಾಸ್ತವ ಅವರು ಶರದ್ ಯಾದವ್ ಬೆಂಬಲಿಗರಾಗಿದ್ದಾರೆ.

 ನಿತೀಶ್ ಕುಮಾರ್ ಅವರ ಸರ್ವಾಧಿಕಾರಿ ವರ್ತನೆಯನ್ನು ವಿರೋಧಿಸಿದ್ದಕ್ಕೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿತೀಶ್ ವರ್ತನೆ ವಿರೋಧಿಸಿದ ಪ್ರಥಮ ವ್ಯಕ್ತಿ ನಾನು. ಅಲ್ಲದೆ ಶರದ್ ಯಾದವ್ ಜೊತೆ ಗುರುತಿಸಿಕೊಂಡಿರುವ ಕಾರಣಕ್ಕೆ ನನಗೆ ಶಿಕ್ಷೆ ವಿಧಿಸಲಾಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News