ದಲಿತ ಕ್ರೈಸ್ತರ ಹಕ್ಕೊತ್ತಾಯ ಸಭೆ: ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲು ಆಗ್ರಹ

Update: 2017-08-10 11:39 GMT

ಮಂಗಳೂರು, ಆ.10: ಮಂಗಳೂರು ಧರ್ಮಪ್ರಾಂತದ ಪಾಲನಾ ಮಂಡಳಿಯ ಸಾಮಾಜಿಕ ಮತ್ತು ಮಾಧ್ಯಮ ಸಮಿತಿಯು ದಲಿತ ಕ್ರೈಸ್ತರನ್ನೂ ಕೂಡ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಹಕ್ಕೊತ್ತಾಯ ಸಭೆ ನಡೆಸಿತು.

ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜ್ಞೊರು ಡೆನಿಸ್ ಮೊರಾಸ್ ಪ್ರಭು ಮಾತನಾಡಿ ಕೇಂದ್ರ ಸರಕಾರ ಆದಷ್ಟು ಶೀಘ್ರ ಸಂವಿಧಾನ ತಿದ್ದುಪಡಿ ತಂದು ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕಲ್ಯಾಣಪುರ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ದೇಶಾದ್ಯಂತ ಇರುವ ಎಲ್ಲ ಕ್ರೈಸ್ತರು ಇಂದು ದಲಿತ ಕ್ರೈಸ್ತರ ಪರವಾಗಿ ಕಪ್ಪು ದಿನ ಆಚರಿಸುತ್ತಿದ್ದಾರೆ. ಆಗಸ್ಟ್ 10, 1950ರಂದು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ದಲಿತ ವಂಚಿತ ಮಸೂದೆಗೆ ಸಹಿ ಹಾಕುವುದರೊಂದಿಗೆ ದಲಿತ ಕ್ರೈಸ್ತರು ಪರಿಶಿಷ್ಟ ಜಾತಿಯವರು ಪಡೆಯುತ್ತಿದ್ದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದರಿಂದ ದಲಿತ ಕ್ರೈಸ್ತರ ಸಾಮಾಜಿಕ ಬದುಕು ಶೋಚನೀಯವಾಗಿದೆ. ಹಾಗಾಗಿ ಈ ಮಸೂದೆಯನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ದಲಿತರಿಗೆ ಸಿಗಬೇಕಾದ ಸೌಲಭ್ಯವನ್ನು 1956ರಲ್ಲಿ ಸಿಖ್ಖರಿಗೆ ನೀಡಲಾಗಿದೆ. 1990ರಲ್ಲಿ ಬೌದ್ಧರಿಗೆ ನೀಡಲಾಗಿದೆ. ಆದರೆ ದಲಿತ ಕ್ರೈಸ್ತರಿಗೆ ಯಾಕೆ ನೀಡುತ್ತಿಲ್ಲ ಎಂದು ಡಾ. ವಿನ್ಸೆಂಟ್ ಆಳ್ವ ಪ್ರಶ್ನಿಸಿದರು.

ಮಂಗಳೂರು ಧರ್ಮಪ್ರಾಂತದ ಪಾಲನಾ ಮಂಡಳಿಯ ಸಾಮಾಜಿಕ ಮತ್ತು ಮಾಧ್ಯಮ ಸಮಿತಿಯ ಸಂಚಾಲಕ ಫಾ. ಒನಿಲ್ ಡಿಸೋಜ ಸ್ವಾಗತಿಸಿದರು. ಕೆಥೊಲಿಕ್ ಸಭಾದ ಅಧ್ಯಕ್ಷ ಅನಿಲ್ ಲೋಬೊ, ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಜಿಲ್ಲಾಧಿಕಾರಿಯ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News