ದಶಕಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕೊಳೆತ 10 ಮಂದಿಯ ಖುಲಾಸೆ
ಹೈದರಾಬಾದ್, ಆ.10: 2005ರಲ್ಲಿ ಸಂಭವಿಸಿದ್ದ ಹೈದರಾಬಾದ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ ನ್ಯಾಯಾಲಯ ಎಲ್ಲಾ 10 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಮೆಟ್ರೋಪೊಲಿಟನ್ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಟಿ. ಶ್ರೀನಿವಾಸ ರಾವ್ ದಶಕಕ್ಕೂ ಹೆಚ್ಚಿನ ಕಾಲ ಜೈಲುಶಿಕ್ಷೆ ಅನುಭವಿಸಿದ್ದ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ.
ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲು ಪ್ರಾಸಿಕ್ಯೂಶನ್ ವಿಫಲವಾಗಿರುವುದರಿಂದ ಎಲ್ಲಾ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪ್ರತಿವಾದಿ ವಕೀಲ ಅಬ್ದುಲ್ ಅಝೀಮ್ ತಿಳಿಸಿದ್ದಾರೆ.
10 ಮಂದಿ ಬಂಧಿತರಲ್ಲಿ ಒಬ್ಬರು ಜಾಮೀನಿನಲ್ಲಿದ್ದರೆ ಉಳಿದವರು ಇನ್ನೂ ಜೈಲಿನಲ್ಲೇ ಇದ್ದಾರೆ.
“ಪೊಲೀಸರ ನಡೆಸಿದ ಪಿತೂರಿಯನ್ನು ನಿರೂಪಿಸಲಾಗಿಲ್ಲ. ಆದರೆ ಅಮಾಯಕರು 10 ವರ್ಷಗಳ ಕಾಲ ತಮ್ಮ ಜೀವನವನ್ನು ಜೈಲಿನಲ್ಲಿ ವ್ಯರ್ಥ ಮಾಡುವಂತಾಯಿತು” ಎಂದು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಟ್ವೀಟ್ ಮಾಡಿದ್ದಾರೆ,
ಆತ್ಮಾಹುತಿ ಬಾಂಬರ್ ಒಬ್ಬ ತನ್ನನ್ನೇ ಸ್ಫೋಟಿಸಿಕೊಂಡು ನಡೆಸಿದ್ದ ದಾಳಿಯಲ್ಲಿ ಓರ್ವ ಹೋಮ್ ಗಾರ್ಡ್ ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.
ಈ ಬಗ್ಗೆ 20 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ವಿಶೇಷ ತನಿಖಾ ತಂಡ 10 ಮಂದಿಯನ್ನು ಬಂಧಿಸಿತ್ತು. ಮುಹಮ್ಮದ್ ಅಬ್ದುಲ್ ಝಾಹಿದ್, ಅಬ್ದುಲ್ ಕಲೀಮ್, ಶಕೀಲ್, ಸೈಯದ್ ಹಾಜಿ, ಅಜ್ಮಲ್ ಅಲಿ ಖಾನ್, ಅಝ್ಮತ್ ಅಲಿ, ಮಹ್ಮೂದ್ ಬರೂದ್ವಾಲಾ, ಶೈಖ್ ಅಬ್ದುಲ್ ಖ್ವಾಜಾ, ನಫೀಸ್ ಬಿಸ್ವಾಸ್, ಬಿಲಾಲುದ್ದೀನ್ ಹಾಗೂ ಓರ್ವ ಬಾಂಗ್ಲಾ ಪ್ರಜೆಯನ್ನು ಬಂಧಿಸಲಾಗಿತ್ತು.