ಕಾರ್ತಿ ಚಿದಂಬರಂ ವಿರುದ್ಧದ ‘ಲುಕ್ ಔಟ್’ ನೋಟಿಸಿಗೆ ಮದ್ರಾಸ್ ಹೈಕೋರ್ಟ್ ತಡೆ
ಹೊಸದಿಲ್ಲಿ,ಆ.10: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧ ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಗುರುವಾರ ತಡೆಯಾಜ್ಞೆ ನೀಡಿದೆ. ತನ್ನ ವಿದೇಶ ಪ್ರಯಾಣಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದ ಈ ನೋಟಿಸಿಗೆ ತಡೆಯಾಜ್ಞೆ ಲಭಿಸಿರುವುದರಿಂದ ಕಾರ್ತಿಗೆ ಭಾರೀ ನೆಮ್ಮದಿ ದೊರಕಿದಂತಾಗಿದೆ.
ಭ್ರಷ್ಟಾಚಾರ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಗಳಲ್ಲಿ ತನಿಖೆ ಎದುರಿಸು ತ್ತಿರುವ ಕಾರ್ತಿ ತನ್ನ ವಿರುದ್ಧ ಕಳೆದ ವಾರ ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸ್‌ನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ತಾನು ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿರುವ ಉದ್ಯಮಿ ಕಾರ್ತಿ, ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಕಳೆದ ವಾರ ತನ್ನ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿರುವುದು ಸುದ್ದಿಯಾಗುತ್ತಿದ್ದಂತೆ ಅವರು ಟ್ವಿಟರ್‌ನಲ್ಲಿ ‘‘ನನಗಾಗಿ ಹುಡುಕುತ್ತಿರುವ ಎಲ್ಲರಿಗಾಗಿ’’ ಎಂಬ ಸಂದೇಶದೊಡನೆ ತನ್ನ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.
ಖಾಸಗಿ ಕಂಪನಿ ಐಎನ್‌ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಲು ಕಾರ್ತಿ ನೆರವಾಗಿದ್ದು, ಅದಕ್ಕಾಗಿ 3.5 ಕೋ.ರೂ.ಗಳನ್ನು ಲಂಚವಾಗಿ ಪಡೆದಿದ್ದರು ಎನ್ನುವುದು ತನಿಖಾ ತಂಡದ ಆರೋಪವಾಗಿದೆ.
ಕೇವಲ 4.62 ಕೋ.ರೂ.ಗಳ ವಿದೇಶಿ ಹೂಡಿಕೆಗೆ ಅನುಮತಿ ಹೊಂದಿದ್ದ ಕಂಪನಿಯು ಸುಮಾರು 305 ಕೋ.ರೂ.ಗಳನ್ನು ಸಂಗ್ರಹಿಸಿತ್ತು. ಆಗ ಪೀಟರ್ ಮುಖರ್ಜಿಯಾ ಮತ್ತು ಅವರ ಪತ್ನಿ ಇಂದ್ರಾಣಿ ಈ ಕಂಪನಿಯನ್ನು ನಡೆಸುತ್ತಿದ್ದು, ಇಂದ್ರಾಣಿಯ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಅವರಿಬ್ಬರೂ ಈಗ ಜೈಲುಪಾಲಾಗಿದ್ದಾರೆ.
ಕಾರ್ತಿ ಆಗ ಕೇಂದ್ರ ವಿತ್ತ ಸಚಿವರಾಗಿದ್ದ ತಂದೆ ಪಿ.ಚಿದಂಬರಂ ಅವರ ಪ್ರಭಾವವನ್ನು ಬಳಸಿಕೊಂಡು ವಿದೇಶಿ ಹೂಡಿಕೆ ನಿಯಮಗಳ ಉಲ್ಲಂಘನೆಗೆ ಸಹಕರಿಸುತ್ತಿದ್ದರು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಚಿದಂಬರಂ ಮತ್ತು ಕಾರ್ತಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ.