×
Ad

‘ಪ್ರಶ್ನೆಗಾಗಿ ಲಂಚ’ ಹಗರಣ: 11 ಮಾಜಿ ಸಂಸದರ ವಿಚಾರಣೆಗೆ ಆದೇಶ

Update: 2017-08-10 19:51 IST

ಹೊಸದಿಲ್ಲಿ, ಆ.10: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣವಾದ 2005ರ ‘ಪ್ರಶ್ನೆಗಾಗಿ ಲಂಚ’ ಹಗರಣಕ್ಕೆ ಸಂಬಂಧಿಸಿ ಆರೋಪಪಟ್ಟಿ ದಾಖಲಿಸಲಾಗಿರುವ 11 ಮಾಜಿ ಸಂಸದರ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಒಳಸಂಚು ಪ್ರಕರಣ ದಾಖಲಿಸಲು ವಿಶೇಷ ನ್ಯಾಯಾಲಯವೊಂದು ಆದೇಶಿಸಿದೆ.

  11 ಮಾಜಿ ಸಂಸದರು ಹಾಗೂ ಓರ್ವ ಖಾಸಗಿ ವ್ಯಕ್ತಿಯ ವಿರುದ್ಧ ಐಪಿಸಿ ಕಾಯ್ದೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮೇಲ್ನೋಟಕ್ಕೆ ಆರೋಪಪಟ್ಟಿ ದಾಖಲಿಸಿಕೊಳ್ಳಲಾಗಿದ್ದು ಆಗಸ್ಟ್ 28ರಂದು ಅಧಿಕೃತವಾಗಿ ಆರೋಪಪಟ್ಟಿ ದಾಖಲಿಸಲಾಗುತ್ತದೆ. ಅಂದು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ವಿಶೇಷ ನ್ಯಾಯಾಧೀಶರಾದ ಪೂನಮ್ ಚೌಧರಿ ಸೂಚಿಸಿದರು. ಹಗರಣದ ಹಿನ್ನೆಲೆಯಲ್ಲಿ ಈ ಸಂಸದರನ್ನು ಉಚ್ಛಾಟಿಸಲಾಗಿತ್ತು.

ಪ್ರಕರಣದಲ್ಲಿ ಆರೋಪಿಗಳಾಗಿರುವ ಸಂಸದರಲ್ಲಿ ಬಿಜೆಪಿಯ ಛತ್ರಪಾಲ್ ಸಿಂಗ್, ಅಣ್ಣಾ ಸಾಹೇಬ್ ಎಂ.ಕೆ.ಪಾಟಿಲ್, ಚಂದ್ರಪ್ರತಾಪ್ ಸಿಂಗ್, ಪ್ರದೀಪ್ ಗಾಂಧಿ, ಸುರೇಶ್ ಚಂದೇಲ್, ವೈ.ಜಿ.ಮಹಾಜನ್; ಆರ್‌ಜೆಡಿಯ ಮನೋಜ್ ಕುಮಾರ್, ಬಿಎಸ್ಪಿಯ ನರೇಂದ್ರ ಕುಮಾರ್ ಕುಶ್‌ವಾಹ, ಲಾಲ್‌ಚಂದ್ರ ಕೋಲ್, ರಾಜಾ ರಾಂಪಾಲ್ ಹಾಗೂ ಕಾಂಗ್ರೆಸ್‌ನ ರಾಮ್‌ಸೇವಕ್ ಸಿಂಗ್ ಸೇರಿದ್ದಾರೆ. ಅಲ್ಲದೆ ರವೀಂದರ್ ಕುಮಾರ್ ಎಂಬವರೂ ಆರೋಪಿಯಾಗಿದ್ದಾರೆ. ಇನ್ನೋರ್ವ ಆರೋಪಿ ಸಂಸದ ವಿಜಯ್ ಫೋಗಟ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇವರ ವಿರುದ್ಧದ ವಿಚಾರಣೆಯನ್ನು ಕೈಬಿಡಲಾಗಿದೆ.

 ಇವರ ಜೊತೆ, ದುಷ್ಕೃತ್ಯಕ್ಕೆ ಪ್ರೇರಣೆ ನೀಡಿದ ಆರೋಪದಡಿ ವೆಬ್ ಸಂಸ್ಥೆಯೊಂದರ ಇಬ್ಬರು ಪತ್ರಕರ್ತರ ವಿರುದ್ಧವೂ ಆರೋಪ ಪಟ್ಟಿ ದಾಖಲಿಸಲಾಗಿತ್ತು. ಆದರೆ ಇವರ ವಿರುದ್ಧದ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು.

 ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣದ ಬೇಡಿಕೆ ಮುಂದಿರಿಸಿರುವುದು ಕುಟುಕು ಕಾರ್ಯಾಚರಣೆಯೊಂದರ ವೇಳೆ ಬೆಳಕಿಗೆ ಬಂದಿತ್ತು. 2005ರ ಡಿ.12ರಂದು ಇದು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಬಳಿಕ ‘ ಪ್ರಶ್ನೆಗಾಗಿ ಲಂಚ’ ಎಂದೇ ಹೆಸರಾಗಿತ್ತು. ಆರೋಪಿಗಳ ವಿರುದ್ಧ ದಿಲ್ಲಿ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News