ಕ್ಯೂಬದಲ್ಲಿ ಅಮೆರಿಕ ರಾಜತಾಂತ್ರಿಕರ ಶ್ರವಣ ಸಾಮರ್ಥ್ಯ ನಾಶ?

Update: 2017-08-10 16:34 GMT

 ವಾಶಿಂಗ್ಟನ್, ಆ. 10: ಅಮೆರಿಕ ಮತ್ತು ಕ್ಯೂಬಗಳ ನಡುವಿನ ಎರಡು ವರ್ಷಗಳ ರಾಜತಾಂತ್ರಿಕ ಸಂಬಂಧ ಮತ್ತೆ ಬಿಕ್ಕಟ್ಟಿಗೆ ಸಿಲುಕಿದೆ. ಕ್ಯೂಬ ರಾಜಧಾನಿ ಹವಾನದಲ್ಲಿರುವ ಅಮೆರಿಕದ ಹಲವು ರಾಜತಾಂತ್ರಿಕರು ಶ್ರವಣದೋಷದಿಂದ ಬಳಲುತ್ತಿದ್ದಾರೆ ಹಾಗೂ ಇದಕ್ಕಾಗಿ ಗುಪ್ತ ಧ್ವನಿ ಉಪಕರಣಗಳನ್ನು ಬಳಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.

2016ರಲ್ಲಿ ಹಲವಾರು ಅಮೆರಿಕನ್ ರಾಜತಾಂತ್ರಿಕರು ಅವರ್ಣನೀಯ ಶ್ರವಣ ದೋಷದಿಂದ ಬಳಲಲು ಆರಂಭಿಸಿದರು ಎಂದು ಈ ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆಯ ಮಾಹಿತಿಯಿರುವ ಅಧಿಕಾರಿಗಳು ಹೇಳಿದ್ದಾರೆ.

2015ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಮುತುವರ್ಜಿಯಿಂದಾಗಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಪುನಾರಂಭಗೊಂಡಿತ್ತು. ಈ ರಾಜತಾಂತ್ರಿಕರ ಪೈಕಿ ಹಲವರು ಆಗಷ್ಟೇ ಹವಾನಕ್ಕೆ ಬಂದಿದ್ದರು.

ಅವರ ಪೈಕಿ ಕೆಲವು ರಾಜತಾಂತ್ರಿಕರ ಲಕ್ಷಣಗಳು ಎಷ್ಟು ತೀವ್ರವಾಗಿತ್ತೆಂದರೆ, ಅವರು ತಮ್ಮ ವಾಸ್ತವ್ಯವನ್ನು ಆರಂಭದಲ್ಲೇ ರದ್ದುಗೊಳಿಸಿ ಅಮೆರಿಕಕ್ಕೆ ವಾಪಸಾಗಿದ್ದರು.

ತಿಂಗಳುಗಳ ಅವಧಿಯ ತನಿಖೆಯ ಬಳಿಕ, ಈ ರಾಜತಾಂತ್ರಿಕರು ಆಧುನಿಕ ಧ್ವನಿ ತರಂಗ ಸಲಕರಣೆಯೊಂದರ ಶ್ರವಣಾತೀತ ಧ್ವನಿ ತರಂಗಗಳ ದಾಳಿಗೆ ಒಳಗಾಗಿದ್ದಾರೆ ಎಂಬ ತೀರ್ಮಾನಕ್ಕೆ ಅಮೆರಿಕದ ಅಧಿಕಾರಿಗಳು ಬಂದರು. ಈ ಸಲಕರಣೆಗಳನ್ನು ಅವರ ನಿವಾಸಗಳ ಒಳಗಡೆ ಅಥವಾ ಹೊರಗಡೆ ಸ್ಥಾಪಿಸಿರುವ ಸಾಧ್ಯತೆ ಇದೆ ಎಂದರು.

ಆದರೆ, ಈ ಸಲಕರಣೆಗಳು ಉದ್ದೇಶಪೂರ್ವಕವಾಗಿ ಅಳವಡಿಸಲಾದ ಶಸ್ತ್ರಗಳೇ ಅಥವಾ ಅವುಗಳ ಉದ್ದೇಶ ಬೇರೆಯಾಗಿತ್ತೆ ಎನ್ನುವುದು ಸ್ಪಷ್ಟವಾಗಿಲ್ಲ.

ಇದಕ್ಕೆ ಪ್ರತೀಕಾರವಾಗಿ, ಅಮೆರಿಕ ಮೇ 23ರಂದು ಇಬ್ಬರು ಕ್ಯೂಬ ರಾಜತಾಂತ್ರಿಕರನ್ನು ವಾಶಿಂಗ್ಟನ್‌ನಿಂದ ಉಚ್ಚಾಟಿಸಿತು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ತಿಳಿಸಿದರು.

ಆದರೆ, ಎಷ್ಟು ಮಂದಿ ಅಮೆರಿಕನ್ ರಾಜತಾಂತ್ರಿಕರು ಇದಕ್ಕೆ ಬಲಿಯಾಗಿದ್ದಾರೆ ಎಂಬುದನ್ನು ತಿಳಿಸಲು ಅಥವಾ ಅವರು ಶ್ರವಣ ದೋಷಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಲು ಅವರು ನಿರಾಕರಿಸಿದರು.

ಕ್ಯೂಬ ನಿರಾಕರಣೆ

ಈ ಆರೋಪಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಕ್ಯೂಬ ಸರಕಾರ, ‘‘ಪ್ರಮಾಣಿತ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಯಾವುದೇ ಕ್ರಮಕ್ಕೆ ಕ್ಯೂಬದ ನೆಲವನ್ನು ಬಳಸಲು ಕ್ಯೂಬ ಯಾವತ್ತೂ ಬಿಟ್ಟಿಲ್ಲ ಹಾಗೂ ಮುಂದೆ ಬಿಡುವುದೂ ಇಲ್ಲ’’ ಎಂದು ಹೇಳಿದೆ.

ಇಬ್ಬರು ಕ್ಯೂಬ ರಾಜತಾಂತ್ರಿಕರನ್ನು ಉಚ್ಚಾಟಿಸುವ ನಿರ್ಧಾರ ‘ಸಮರ್ಥನೀಯವಲ್ಲ ಹಾಗೂ ಆಧಾರರಹಿತ’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News