ತಾಜ್‌ಮಹಲ್ ಸಮಾಧಿಯೋ? ದೇಗುಲವೋ ?

Update: 2017-08-10 18:05 GMT

ಹೊಸದಿಲ್ಲಿ, ಆ. 10: ತಾಜ್‌ಮಹಲ್ ಷಹಜಹಾನ್ ನಿರ್ಮಿಸಿದ ಸಮಾಧಿಯೇ ? ಅಥವಾ ರಜಪೂತರ ರಾಜ ಮೊಗಲ್ ಸಾಮ್ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ ಶಿವ ದೇಗುಲವೇ ? ಈ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ನಿರ್ದೇಶಿಸಿದೆ.

ಈ ವಿಚಾರದ ಬಗ್ಗೆ ಸ್ಪಷ್ಟಪಡಿಸುವಂತೆ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಮನವಿಯೊಂದು ಬಂದಿದ್ದು, ಸಿಐಸಿ ಅದನ್ನು ಸಾಂಸ್ಕೃತಿಕ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.

ಜಗತ್ತಿನ ಅದ್ಭುತಗಳಲ್ಲಿ ಒಂದಾದ ಸಮಾಧಿಯ ಇತಿಹಾಸದ ಬಗೆಗಿನ ಸಂದೇಹಗಳನ್ನು ಸ್ವಷ್ಟಪಡಿಸಿಕೊಳ್ಳುವುದು ಹಾಗೂ ವಿವಾದಕ್ಕೆ ಸಚಿವಾಲಯ ತೆರೆ ಎಳೆಯಬೇಕಿದೆ ಎಂದು ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯಲು ಇತ್ತೀಚೆಗಿನ ಆದೇಶದಲ್ಲಿ ತಿಳಿಸಿದ್ದರು.

  ತಾಜ್‌ಮಹಲ್ ಮೂಲದ ಬಗೆಗಿನ ಪ್ರಕರಣಗಳ ಬಗ್ಗೆ ಹಾಗೂ ಚರಿತ್ರೆಕಾರ ಪಿ.ಎನ್. ಓಕ್, ನ್ಯಾಯವಾದಿ ಯೋಗೇಶ್ ಸಕ್ಸೇನ ಅವರ ಬರೆವಣಿಗೆಗಳು ಆಗಾಗ ಪ್ರತಿಪಾದಿಸುತ್ತಿರುವುದರ ಬಗ್ಗೆ ಸಚಿವಾಲಯ ತನ್ನ ನಿಲುವು ತಿಳಿಸಬೇಕು ಎಂದು ಅಚಾರ್ಯುಲು ಶಿಪಾರಸು ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ನ್ಯಾಯಾಲಯ ಗಳಲ್ಲಿ ಈ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳನ್ನು ವಜಾಗೊಳಿಸ ಲಾಗಿದೆ. ಇನ್ನು ಕೆಲವು ವಿಚಾರಣೆ ಹಂತದಲ್ಲಿದೆ ಎಂದು ಅವರು ಹೇಳಿದರು.

ಕೆಲವು ಪ್ರಕರಣಗಳ ವಿಚಾರಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಹಾಜರಾಗಿದೆ. ತನ್ನ ಹಾಗೂ ಸಾಂಸ್ಕೃತಿಕ ಸಚಿವಾಲಯದ ಪರವಾಗಿ ಅಫಿದಾವಿತ್ (ಪ್ರತಿವಾದ) ಅನ್ನು ಸಲ್ಲಿಸಿದೆ ಎಂದು ಅವರು ತಿಳಿಸಿದರು.

ತಾವು ಹೊಂದಿರುವ ದಾಖಲೆಯ ಪ್ರತಿಯನ್ನು 2017 ಆಗಸ್ಟ್ 30ರ ಮುನ್ನ ಅರ್ಜಿದಾರರಿಗೆ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News