ಇನ್ನು ಮುಂದೆ ವ್ಯಾಟ್ಸ್ ಆ್ಯಪ್ ಮೂಲಕ ಹಣ ರವಾನಿಸಬಹುದು !

Update: 2017-08-10 18:06 GMT

ಹೊಸದಿಲ್ಲಿ, ಆ.10: ಯುಪಿಐ (ಯುನಿಫೈಡ್ ಪೇಯ್‌ಮೆಂಟ್ ಇಂಟರ್‌ಫೇಸ್) ವರ್ಗಾವಣೆ ವ್ಯವಸ್ಥೆ ಮೂಲಕ ಕ್ಷಣಾರ್ಧದಲ್ಲಿ ಹಣ ರವಾನಿಸಲು ತನ್ನ ಬಳಕೆದಾರರಿಗೆ ಅವಕಾಶ ಕಲ್ಪಿಸಲು ಮೊಬೈಲ್ ಅಪ್ಲಿಕೇಷನ್ ವ್ಯಾಟ್ಸ್ ಆ್ಯಪ್ ಚಿಂತಿಸುತ್ತಿದೆ.

 ವ್ಯಾಟ್ಸ್ ಆ್ಯಪ್ ಮೂಲಕ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಹಣ ರವಾನಿಸುವ ಬಗ್ಗೆ ವ್ಯಾಟ್ಸ್ ಆ್ಯಪ್ ಚಿಂತಿಸುತ್ತಿದೆ ಎಂದು ಬ್ಲಾಗ್ ವೆಬ್‌ಸೈಟ್ ಡಬ್ಲುಎ ಬೆಟಾಲ್ ಇನ್ಫೋ ಹೇಳಿದೆ.

ಗೂಗಲ್ ಪ್ಲೇ ಬೇಟಾ ಪ್ರೋಗ್ರಾಮ್ನ ನೂತನ ಆವೃತ್ತಿ 2.17.295ರಲ್ಲಿ ಯುಪಿಐ ಮೂಲಕ ತಕ್ಷಣ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಹಣ ರವಾನಿಸುವ ಸೌಲಭ್ಯವಿದೆ. ಆದಾಗ್ಯೂ, ಆ್ಯಂಡ್ರಾಯ್ಡ್ ಗಾಗಿ ಇರುವ ಅಧಿಕೃತ ವ್ಯಾಟ್ಸ್ ಆ್ಯಪ್ ಪೇಮೆಂಟ್ ಸೆಕ್ಷನ್ ಈಗಲೂ ಈ ವ್ಯವಸ್ಥೆ ರೂಪಿಸುವಲ್ಲಿ ತೊಡಗಿಕೊಂಡಿದೆ.

ಮೊಬೈಲ್ ಬಳಸಿ ಎರಡು ಬ್ಯಾಂಕ್‌ಗಳ ಖಾತೆಗಳ ನಡುವೆ ತತ್‌ಕ್ಷಣ ಹಣ ವರ್ಗಾವಣೆ ಮಾಡುವ ಯುಪಿಐಯನ್ನು ನ್ಯಾಶನಲ್ ಕಾರ್ಪೋರೇಶನ್ ಆಫ್ ಇಂಡಿಯಾ ಆರಂಭಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ನಿಯಂತ್ರಿಸುತ್ತಿದೆ.

ತಿಂಗಳಲ್ಲಿ 200 ದಶಲಕ್ಷ ಸಕ್ರಿಯ ಬಳಕೆದಾರರಿರುವ ವ್ಯಾಟ್ಸ್ ಆ್ಯಪ್ ಕೆಲವು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿದೆ. ಇನ್ನು ಮುಂದೆ ಯುಪಿಐ ಮೂಲಕ ಹಣಕಾಸು ವರ್ಗಾವಣೆಗೆ ಎನ್‌ಪಿಸಿಐ ವ್ಯಾಟ್ಸ್ ಆ್ಯಪ್‌ನ ಬಳಕೆದಾರರಿಗೆ ಅವಕಾಶ ನೀಡಲಿದೆ.

ವಿಚಾಟ್ ಹಾಗೂ ಹೈಕ್ ಮೆಸೆಂಜರ್‌ನಂತಹ ಇತರ ಕೆಲವು ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳು ಈಗಾಗಲೇ ಯುಪಿಐ ಆಧರಿಸಿದ ಪಾವತಿ ಸೇವೆ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News