ಹಿಂದೂ ಮಹಾಸಾಗರದ ಭದ್ರತೆಗೆ ಭಾರತದ ಜೊತೆ ಕೈಜೋಡಿಸಲು ಮುಂದಾದ ಚೀನಾ

Update: 2017-08-11 14:07 GMT

ಬೀಜಿಂಗ್, ಆ. 11: ಹಿಂದೂ ಮಹಾ ಸಾಗರದಲ್ಲಿ ಚೀನಾ ಸೇನೆಯ ಹೆಚ್ಚುತ್ತಿರುವ ಉಪಸ್ಥಿತಿಯಿಂದ ಭಾರತದಲ್ಲಿ ಕಳವಳ ಹೆಚ್ಚುತ್ತಿರುವಂತೆಯೇ, ಹಿಂದೂ ಮಹಾ ಸಾಗರದ ಭದ್ರತೆಯನ್ನು ಕಾಯ್ದುಕೊಳ್ಳಲು ಭಾರತದ ಜೊತೆ ಕೈಜೋಡಿಸುವ ಇಚ್ಛೆಯನ್ನು ಚೀನಾದ ನೌಕಾಪಡೆ ವ್ಯಕ್ತಪಡಿಸಿದೆ.

ಚೀನಾದ ಕರಾವಳಿ ನಗರ ಝನ್‌ಜಿಯಾಂಗ್‌ನಲ್ಲಿರುವ ತನ್ನ ಆಯಕಟ್ಟಿನ ದಕ್ಷಿಣ ಸಮುದ್ರ ನೌಕಾಪಡೆ (ಎಸ್‌ಎಸ್‌ಎಫ್)ಯ ನೆಲೆಯನ್ನು ಮೊದಲ ಬಾರಿಗೆ ಭಾರತೀಯ ಪತ್ರಕರ್ತರ ತಂಡವೊಂದಕ್ಕೆ ತೋರಿಸಿದ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿ (ಪಿಎಲ್‌ಎಎನ್) ಅಧಿಕಾರಿಗಳು, ಹಿಂದೂ ಮಹಾಸಾಗರವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸೇರಿದ ಪ್ರದೇಶವಾಗಿದೆ ಎಂದು ಹೇಳಿದ್ದಾರೆ.

‘‘ಹಿಂದೂ ಮಹಾ ಸಾಗರದ ಭದ್ರತೆಯ ವಿಷಯದಲ್ಲಿ ಚೀನಾ ಮತ್ತು ಭಾರತಗಳು ಜಂಟಿ ದೇಣಿಗೆಗಳನ್ನು ನೀಡಬಹುದು ಎನ್ನುವುದು ನನ್ನ ಅಭಿಪ್ರಾಯ’’ ಎಂದು ಚೀನಾದ ಎಸ್‌ಎಸ್‌ಎಫ್‌ನ ಡೆಪ್ಯುಟಿ ಚೀಫ್ ಆಫ್ ಜನರಲ್ ಆಫಿಸ್ ಕ್ಯಾಪ್ಟನ್ ಲಿಯಾಂಗ್ ತಿಯಾನ್ಜುನ್ ಹೇಳಿದರು.

ಚೀನಾದ ನೌಕಾಪಡೆಯು ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು ಬೃಹತ್ ಯೋಜನೆಯೊಂದನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಚೀನಾದ ಯುದ್ಧ ನೌಕೆಗಳು ಮತ್ತು ಸಬ್‌ಮರೀನ್‌ಗಳು ಹಿಂದೂ ಮಹಾ ಸಾಗರದಲ್ಲಿ ಹೆಚ್ಚು ಸಕ್ರಿಯವಾಗಿರುವುದನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಹಿಂದೂ ಮಹಾ ಸಾಗರದ ಹಾರ್ನ್ ಆಫ್ ಆಫ್ರಿಕದ ಡಿಜಿಬೂಟಿಯಲ್ಲಿ ಚೀನಾ ಈಗಾಗಲೇ ನೌಕಾ ನೆಲೆಯೊಂದನ್ನು ಸ್ಥಾಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಡಿಜಿಬೂಟಿ ನೌಕಾ ನೆಲೆಯು ಸರಂಜಾಮು ಕೇಂದ್ರವಾಗಲಿದೆ ಹಾಗೂ ಅದು ಕಡಲ್ಗಳ್ಳರ ನಿಗ್ರಹಕ್ಕೆ ಒತ್ತುನೀಡುವುದು ಎಂದು ಅವರು ನುಡಿದರು.

ಡಿಜಿಬೂಟಿ ನೆಲೆಯು ಚೀನಾದ ನೌಕಾ ಸಿಬ್ಬಂದಿಗೆ ವಿಶ್ರಾಂತಿ ತಾಣವಾಗಿಯೂ ಕೆಲಸ ಮಾಡುವುದು.

ಅಲ್ಲಿ 300 ನೌಕಾ ಹಡಗುಗಳು, ಬಾಂಬರ್ ಹಡಗುಗಳು, ಕರಾವಳಿ ಗಸ್ತು ನೌಕೆಗಳು, ಪರಮಾಣು ಸಜ್ಜಿತ ಮತ್ತು ಸಜ್ಜಿತವಲ್ಲದ ಸಬ್‌ಮರೀನ್‌ಗಳಿವೆ.

ಅಮೆರಿಕದ ಯುದ್ಧ ನೌಕೆಗೆ ಚೀನಾ ಆಕ್ಷೇಪ

ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿರುವ ಕೃತಕ ದ್ವೀಪವೊಂದರ ಸಮೀಪದಲ್ಲಿ ಅಮೆರಿಕ ಯುದ್ಧ ನೌಕೆಯೊಂದು ಹಾದು ಹೋಗಿರುವುದಕ್ಕೆ ಚೀನಾ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ.

ಅಮೆರಿಕದ ಯುದ್ಧ ನೌಕೆ ‘ಯುಎಸ್‌ಎಸ್ ಜಾನ್ ಎಸ್. ಮೆಕೇನ್’ ಚೀನಾದ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಹಾಗೂ ಈ ಘಟನೆಯು ದೇಶದ ಸಾರ್ವಭೌಮತೆ ಮತ್ತು ಭದ್ರತೆಯನ್ನು ‘ಗಂಭೀರ’ ಅಪಾಯಕ್ಕೊಡ್ಡಿದೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಹೇಳಿದ್ದಾರೆ.

ಯುಎಸ್‌ಎಸ್ ಜಾನ್ ಎಸ್. ಮೆಕೇನ್ ಯುದ್ಧ ನೌಕೆಯು ‘ನೌಕಾಯಾನ ಸ್ವಾತಂತ್ರ’ದ ಭಾಗವಾಗಿ ಗುರುವಾರ ಚೀನಾ ನಿರ್ಮಿಸಿರುವ ಕೃತಕ ದ್ವೀಪ ‘ಮಿಸ್ಚೀಫ್ ರೀಫ್’ನಿಂದ 6 ನಾಟಿಕಲ್ ಮೈಲು ದೂರದಲ್ಲಿ ಹಾದುಹೋಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News