×
Ad

ಭಾರತೀಯ ಅಮೆರಿಕನ್ ಉದ್ಯಮಿಗೆ ಭಾರೀ ದಂಡ

Update: 2017-08-11 19:41 IST

ವಾಶಿಂಗ್ಟನ್, ಆ. 11: ತಪ್ಪು ಎಚ್-1ಬಿ ವೀಸಾ ಅರ್ಜಿಗಳನ್ನು ಸಲ್ಲಿಸಿರುವ ಆರೋಪದಲ್ಲಿ ನ್ಯೂಹ್ಯಾಂಪ್‌ಶಯರ್‌ನಲ್ಲಿರುವ ಭಾರತೀಯ ಅಮೆರಿಕನ್ ಉದ್ಯಮಿಯೊಬ್ಬರಿಗೆ ನ್ಯಾಯಾಲಯವೊಂದು 40,000 ಡಾಲರ್ (ಸುಮಾರು 25.65 ಲಕ್ಷ ರೂಪಾಯಿ) ದಂಡ ವಿಧಿಸಿದೆ ಹಾಗೂ ಅವರನ್ನು ಮೂರು ವರ್ಷಗಳವರೆಗೆ ನಿಗಾದಲ್ಲಿರಿಸಿದೆ ಎಂದು ಅಮೆರಿಕದ ಅಟಾರ್ನಿಯೊಬ್ಬರು ಹೇಳಿದ್ದಾರೆ.

ಇದಕ್ಕೂ ಮೊದಲು, ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಗೆ ತಪ್ಪು ಹೇಳಿಕೆಗಳನ್ನು ನೀಡಿರುವುದನ್ನು ಉದ್ಯಮಿ ರೋಹಿತ್ ಸಕ್ಸೇನ ಒಪ್ಪಿಕೊಂಡಿದ್ದರು ಎಂಬುದಾಗಿ ನ್ಯಾಯಾಲಯದ ದಾಖಲೆಗಳು ಹೇಳಿವೆ.

ನ್ಯೂಹ್ಯಾಂಪ್‌ಶಯರ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಸ್ಯಾಕ್ಸ್ ಐಟಿ ಗ್ರೂಪ್ ಎಲ್‌ಎಲ್‌ಸಿ ಕಂಪೆನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ 42 ವರ್ಷದ ಸಕ್ಸೇನ, ಸುಳ್ಳು ಮಾಹಿತಿಯನ್ನೊಳಗೊಂಡ 45 ವೀಸಾ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕ್ಯಾಲಿಫೋರ್ನಿಯದಲ್ಲಿರುವ ಕಂಪೆನಿಯೊಂದಕ್ಕೆ ವೃತ್ತಿಪರ ಸೇವೆಗಳನ್ನು ನೀಡುವುದಕ್ಕಾಗಿ ತನ್ನ ಕಂಪೆನಿ ವಿದೇಶಿ ಉದ್ಯೋಗಿಗಳನ್ನು ನೇಮಿಸುತ್ತಿದೆ ಎಂಬ ಮಾಹಿತಿಯನ್ನು ಅವರು ತನ್ನ ವೀಸಾ ಅರ್ಜಿಯಗಳಲ್ಲಿ ನೀಡಿದ್ದರು.

 ಆದರೆ, ಕ್ಯಾಲಿಫೋರ್ನಿಯದ ಕಂಪೆನಿಯು ಸ್ಯಾಕ್ಸ್ ಐಟಿ ಗ್ರೂಪ್‌ನೊಂದಿಗೆ ಈ ಸಂಬಂಧ ಒಡಂಬಡಿಕೆಗೆ ಬಂದಿಲ್ಲ ಹಾಗೂ ವಿದೇಶಿ ಉದ್ಯೋಗಿಗಳಿಗೆ ಅದು ಖಾಲಿ ಹುದ್ದೆಗಳನ್ನೂ ಹೊಂದಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News