ಪುಟಿನ್‌ಗೆ ಧನ್ಯವಾದ ಹೇಳಿದ ಟ್ರಂಪ್

Update: 2017-08-11 15:20 GMT

ಬೆಡ್‌ಮಿನ್‌ಸ್ಟರ್ (ಅಮೆರಿಕ), ಆ. 11: ರಶ್ಯದಲ್ಲಿರುವ ಅಮೆರಿಕನ್ ರಾಜತಾಂತ್ರಿಕರ ಸಂಖ್ಯೆಯನ್ನು ಗಣನೀಯವಾಗಿ ಕಡಿತ ಮಾಡಲು ಸೂಚನೆ ನೀಡಿರುವುದಕ್ಕಾಗಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರಿಗೆ ಅಮೆರಿಕ ಅಧ್ಯಕ್ಷ ಡೊನಲ್ಡ್ ಟ್ರಂಪ್ ಗುರುವಾರ ಧನ್ಯವಾದ ಸಲ್ಲಿಸಿದ್ದಾರೆ. ಇದರಿಂದ ಅವರ ಸಂಬಳದ ಹಣ ಉಳಿಯುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪದಲ್ಲಿ ರಶ್ಯದ ವಿರುದ್ಧ ಅಮೆರಿಕ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದಕ್ಕೆ ಪ್ರತೀಕಾರವಾಗಿ ಪುಟಿನ್ ಈ ಕ್ರಮ ತೆಗೆದುಕೊಂಡಿದ್ದರು. ಅಮೆರಿಕದ ರಾಜತಾಂತ್ರಿಕರು ಮತ್ತು ಸ್ಥಳೀಯ (ರಶ್ಯದ) ಸಿಬ್ಬಂದಿ ಸೇರಿದಂತೆ ರಶ್ಯದಲ್ಲಿರುವ ಅಮೆರಿಕದ 755 ಸಿಬ್ಬಂದಿಯನ್ನು ಕಡಿತ ಮಾಡುವಂತೆ ಹಾಗೂ ಎರಡು ಕಚೇರಿಗಳನ್ನು ಮುಚ್ಚುವಂತೆ ಪುಟಿನ್ ಆದೇಶಿಸಿದ್ದರು.

 ‘‘ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಯಾಕೆಂದರೆ, ನಾವು ನಮ್ಮ ಸಂಬಳದ ವೆಚ್ಚವನ್ನು ಕಡಿತ ಮಾಡಲು ಪ್ರಯತ್ನಿಸುತ್ತಿದ್ದೇವೆ. ನನ್ನ ಮಟ್ಟಿಗೆ ಹೇಳುವುದಾದರೆ, ಭಾರೀ ಸಂಖ್ಯೆಯ ಉದ್ಯೋಗಿಗಳನ್ನು ಕೈಬಿಡಲು ಹೇಳಿರುವುದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ. ಇನ್ನು ನಾವು ಸಂಬಳಕ್ಕಾಗಿ ಕಡಿಮೆ ಮೊತ್ತ ಖರ್ಚು ಮಾಡಬಹುದಾಗಿದೆ. ನಾವು ತುಂಬಾ ಹಣವನ್ನು ಉಳಿಸಬಹುದಾಗಿದೆ’’ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News