ದೇಶದ ಪ್ರಪ್ರಥಮ ವಾಯುಯಾನ ವಿವಿ ಆ.18ರಂದು ಉದ್ಘಾಟನೆ
ಹೊಸದಿಲ್ಲಿ, ಆ.13: ದೇಶದ ಪ್ರಪ್ರಥಮ ವಾಯುಯಾನ ವಿವಿ - ‘ ರಾಜೀವಗಾಂಧಿ ನ್ಯಾಷನಲ್ ಏವಿಯೇಷನ್ ಯುನಿವರ್ಸಿಟಿ’ ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಫರ್‌ಸತ್‌ಗಂಜ್‌ನಲ್ಲಿ ಆಗಸ್ಟ್ 18ರಂದು ಉದ್ಘಾಟನೆಯಾಗಲಿದೆ.
ನಾಗರಿಕ ವಾಯುಯಾನ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿರುವ ಈ ಕೇಂದ್ರೀಯ ವಿವಿಯು ವಾಯುಯಾನ ಅಧ್ಯಯನ, ಬೋಧನೆ, ತರಬೇತಿ, ಸಂಶೋಧನೆ ಇತ್ಯಾದಿಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ವಾಯುಪಡೆಯ ನಿವೃತ್ತ ವೈಸ್ ಮಾರ್ಷಲ್ ನಳಿನ್ ಟಂಡನ್ ಅವರು ಉಪಕುಲಪತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ರಾಜೀವಗಾಂಧಿ ರಾಷ್ಟ್ರೀಯ ವಾಯುಯಾನ ವಿವಿ (ಆರ್‌ಜಿಎನ್‌ಎಯು) ಸ್ಥಾಪನೆಯ ಮಸೂದೆ 2013-ಕ್ಕೆ ಕೇಂದ್ರ ಸಚಿವ ಸಂಪುಟ 2013ರಲ್ಲಿ ಅನುಮೋದನೆ ನೀಡಿತ್ತು. ಇದಕ್ಕೆ ರಾಷ್ಟ್ರಪತಿಯ ಸಮ್ಮತಿ ದೊರೆತ ಬಳಿಕ 2013ರ ಸೆ.19ರಂದು ಗಝೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಕೇಂದ್ರ ಸರಕಾರದ ಅಧೀನದಲ್ಲಿರುವ ಸ್ವಾಯತ್ತ ವಿಮಾನ ಹಾರಾಟ ತರಬೇತಿ ಸಂಸ್ಥೆ ‘ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿ’ಗೆ ಸಂಬಂಧಿಸಿದ 26.35 ಎಕರೆ ಜಮೀನನ್ನು ಆರ್‌ಜಿಎನ್‌ಎಯು ಗಾಗಿ ಪ್ರಥಮ ಹಂತದಲ್ಲಿ ಮೀಸಲಿರಿಸಲಾಗಿದೆ. ವಿಮಾನಯಾನ ಅಧ್ಯಯನ ಮತ್ತು ತರಬೇತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಎಂಆರ್ ವಿಮಾನಯಾನ ಅಕಾಡೆಮಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.