ಕಾಶ್ಮೀರದಲ್ಲೀಗ ಭಯೋತ್ಪಾದಕರು ಪಲಾಯನ ಮಾಡುತ್ತಿದ್ದಾರೆ: ಜೇಟ್ಲಿ
ಹೊಸದಿಲ್ಲಿ,ಆ.13: ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದಕರೀಗ ಪಲಾಯನ ಮಾಡುತ್ತಿದ್ದಾರೆ ಮತ್ತು ಜನರಲ್ಲಿ ಭೀತಿ ಮೂಡಿಸುವ ಕಾರ್ಯವನ್ನು ಅವರು ದಶಕಗಳ ವರೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ರವಿವಾರ ಇಲ್ಲಿ ಹೇಳಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು, ಕಾಶ್ಮೀರವನ್ನು ಸಶಸ್ತ್ರ ಉಗ್ರಗಾಮಿಗಳಿಂದ ಮುಕ್ತಗೊಳಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಪ್ರತಿಪಾದಿಸಿದರು.
ಇಂಡಿಯಾ ಟುಡೇಯ ‘ವಂದೇ ಮಾತರಂ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕಾಶ್ಮೀರದಲ್ಲಿಯ ಭಯೋತ್ಪಾದಕರು ಈಗ ಭಾರೀ ಒತ್ತಡಕ್ಕೆ ಸಿಲುಕಿದ್ದಾರೆ. ನೋಟು ಅಮಾನ್ಯ ಮತ್ತು ಅಕ್ರಮ ವಿದೇಶಿ ಹಣಕಾಸು ನೆರವು ಕುರಿತಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೈಗೊಂಡಿರುವ ಕ್ರಮಗಳಿಂದಾಗಿ ಉಂಟಾದ ಆರ್ಥಿಕ ಮುಗ್ಗಟ್ಟು ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಭಾರೀ ಪ್ರಮಾಣದಲ್ಲಿ ಕಡಿವಾಣ ಹಾಕಿದೆ ಎಂದರು.
ಸಿಕ್ಕಿಮ್‌ನ ಡೋಕಾ ಲಾ ಪ್ರದೇಶದಲ್ಲಿ ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆ ಕುರಿತು ಯಾವುದೇ ಹೇಳಿಕೆಯನ್ನು ನೀಡುವ ಗೋಜಿಗೆ ಹೋಗದ ಅವರು, ನಮ್ಮ ಭದ್ರತಾ ಪಡೆಗಳ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿರೋಣ ಎಂದಷ್ಟೇ ಹೇಳಿದರು.
ದೇಶವಿಂದು ಎರಡು ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿದೆ. ಒಂದು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ್ದು, ಅಲ್ಲಿ ಗಡಿಯಾಚೆಯ ಭಯೋತ್ಪಾದನೆ ಹೆಚ್ಚಿನ ಘಟನೆಗಳಿಗೆ ಕಾರಣವಾಗಿದೆ. ಎರಡನೆಯದು ದೇಶದ ಮಧ್ಯಭಾಗಗಳಲ್ಲಿನ ಎಡಪಂಥೀಯ ಆತಂಕವಾದದ ಸಮಸ್ಯೆಯಾಗಿದೆ ಎಂದ ಅವರು, ದೇಶಕ್ಕೆ ಸ್ವಾತಂತ್ರ ದೊರಕಿದಾಗಿನಿಂದಲೂ ಕಾಶ್ಮೀರವು ಭಾರತದ ಅಖಂಡ ಭಾಗ ಎನ್ನುವುದನ್ನು ಪಾಕಿಸ್ತಾನ ವೆಂದಿಗೂ ಒಪ್ಪಿಕೊಂಡಿಲ್ಲ. ಅದು ಅವರ ಅಪೂರ್ಣ ಕಾರ್ಯಸೂಚಿಯಾಗಿದೆ. ಅವರು ನಮ್ಮಿಂದಿಗೆ ಮೂರು ಯುದ್ಧಗಳನ್ನು ಮಾಡಿ ಸೋತಿದ್ದಾರೆ. 1990ರ ದಶಕದಲ್ಲಿ ತಮ್ಮ ಕಾರ್ಯತಂತ್ರವನ್ನು ಬದಲಿಸಿದ ಅವರು ದೇಶದೊಳಗೆ ಭಯೋತ್ಪಾದನೆಯನ್ನು ಉತ್ತೇಜಿಸತೊಡಗಿದ್ದರು ಎಂದರು.
ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ನಮ್ಮ ಪಡೆಗಳು ಪ್ರಾಬಲ್ಯ ಸಾಧಿಸಿವೆ ಮತ್ತು ಅವರ ಕಣ್ಣು ತಪ್ಪಿಸಿ ಗಡಿಯೊಳಕ್ಕೆ ನುಸುಳುವುದು ಭಯೋತ್ಪಾದಕರಿಗೆ ಕಷ್ಟವಾಗುತ್ತಿದೆ ಎಂದೂ ಜೇಟ್ಲಿ ಹೇಳಿದರು.
ಪಾಕಿಸ್ತಾನದಿಂದ ಭಾರತೀಯ ಯೋಧರ ಶಿರಚ್ಛೇದ ಮತ್ತು ಅಂಗಛೇದ ಕುರಿತು ಪ್ರಶ್ನೆಗೆ ಜೇಟ್ಲಿ , ಆ ನಂತರ ಏನಾಯಿತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು ಎಂದು ಸರ್ಜಿಕಲ್ ದಾಳಿಯನ್ನು ಪ್ರಸ್ತಾಪಿಸಿ ಉತ್ತರಿಸಿದರು.