‘ಸಾಕಷ್ಟು ಆಮ್ಲಜನಕ ದಾಸ್ತಾನಿರಲಿ’: ಉ.ಪ್ರ.ಮೆಡಿಕಲ್ ಕಾಲೇಜುಗಳಿಗೆ ಸೂಚನೆ

Update: 2017-08-13 16:00 GMT

ಲಕ್ನೋ,ಆ.13: ಔಷಧಿಗಳು ಅಥವಾ ಆಮ್ಲಜನಕದ ಕೊರತೆಯಿರದಂತೆ ನೋಡಿಕೊಳ್ಳುವಂತೆ ಉತ್ತರ ಪ್ರದೇಶ ಸರಕಾರವು ರಾಜ್ಯದಲ್ಲಿಯ ಎಲ್ಲ ಮೆಡಿಕಲ್ ಕಾಲೇಜುಗಳಿಗೆ ಸೂಚಿಸಿದೆ.

ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆದಾರರಿಗೆ ಬಾಕಿಯೇನಾದರೂ ಇದ್ದರೆ ಅದನ್ನು ತಕ್ಷಣ ಪಾವತಿಸುವಂತೆಯೂ ವೈದ್ಯಕೀಯ ಶಿಕ್ಷಣ ಇಲಾಖೆಯು ಮೆಡಿಕಲ್ ಕಾಲೇಜು ಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಗೋರಖಪುರ ದುರಂತದ ಬಳಿಕ ಆಸ್ಪತ್ರೆಗಳಲ್ಲಿ ಔಷಧಿ ಅಥವಾ ಆಮ್ಲಜನಕದ ಕೊರತೆಯಿರದಂತೆ ನೋಡಿಕೊಳ್ಳುವಂತೆ ಎಲ್ಲ ಒಂಭತ್ತು ಸರಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 12 ಇತರ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಿಗೆ ನಾವು ಲಿಖಿತ ಆದೇಶವನ್ನು ಹೊರಡಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿತಾ ಭಟ್ನಾಗರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಯಾವುದೇ ಔಷಧಿ ಅಥವಾ ಆಮ್ಲಜನಕದ ಕೊರತೆಯಿಲ್ಲ ಎನ್ನುವುದನ್ನು ಖುದ್ದಾಗಿ ಖಚಿತ ಪಡಿಸಿಕೊಳ್ಳುವಂತೆ ಎಲ್ಲ ಮೆಡಿಕಲ್ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ ಮತ್ತು ಈ ವಿಷಯದಲ್ಲಿ ನಿರ್ಲಕ್ಷವನ್ನು ಸಹಿಸುವುದಿಲ್ಲ ಎಂದರು.

ಗೋರಖಪುರದ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ ಎಂದ ಅವರು, ಅಲ್ಲಿ ಆಮ್ಲಜನಕ ಪೂರೈಕೆಗಾಗಿ ಈಗಾಗಲೇ ಹಣವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News