ಪಾಕ್: ಬಾಂಬ್ ಸ್ಫೋಟಕ್ಕೆ 15 ಬಲಿ

Update: 2017-08-13 16:09 GMT

ಕರಾಚಿ, ಆ.13: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತದ ಕ್ವೆಟ್ಟಾ ನಗರದಲ್ಲಿ ರವಿವಾರ ಸೇನಾ ಟ್ರಕ್ಕೊಂದನ್ನು ಗುರಿಯಿರಿಸಿ ನಡೆಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಎಂಟು ಮಂದಿ ಸೈನಿಕರು ಸೇರಿದಂತೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ.

   ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟ್ಟಾದ ಬಿಗಿಭದ್ರತೆಯ ಪ್ರದೇಶದಲ್ಲಿರುವ ಪಿಶಿನ್ ಬಸ್‌ನಿಲ್ದಾಣದ ಸಮೀಪವಿರುವ ಪಾರ್ಕಿಂಗ್ ತಾಣದಲ್ಲಿ ಪ್ರಬಲವಾದ ಬಾಂಬ್ ಸ್ಫೋಟ ಸಂಭವಿಸಿದೆ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ಟ್ರಕ್‌ನ್ನು ಗುರಿಯಿರಿಸಿ ಬಾಂಬ್ ಸ್ಫೋಟ ನಡೆಸಲಾಗಿದೆ.ಟ್ರಕ್‌ನಲ್ಲಿದ್ದ ಎಂಟು ಸೈನಿಕರು ಸಾವನ್ನಪ್ಪಿರುವುದಾಗಿ ಪಾಕ್ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗದ (ಐಎಸ್‌ಪಿಆರ್) ಹೇಳಿಕೆ ತಿಳಿಸಿದೆ. ಸ್ಫೋಟದಲ್ಲಿ ಇತರ 10 ಮಂದಿ ಸೈನಿಕರಿಗೆ ಗಾಯಗಳಾಗಿದ್ದು, ಅವರು ಕೂಡಾ ಮಿಲಿಟರಿ ಟ್ರಕ್‌ನಲ್ಲಿದ್ದರೆಂದು ತಿಳಿದುಬಂದಿದೆ.

ಸ್ಫೋಟದಲ್ಲಿ ಏಳು ಮಂದಿ ನಾಗರಿಕರು ಮೃತಪಟ್ಟಿರುವುದಾಗಿ ಬಲೂಚಿಸ್ತಾನದ ಗೃಹ ಸಚಿವ ಸರ್ಫ್ರಾಝ್ ಭುಗ್ತಿ ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿದ್ದು, ಬಾಂಬ್‌ನ್ನು ಸ್ಥಳದಲ್ಲಿ ಇರಿಸಲಾಗಿತ್ತೇ ಅಥವಾ ಇದೊಂದು ಆತ್ಮಹತ್ಯಾ ದಾಳಿಯೇ ಎಂಬುದು ವಿಚಾರಣೆಯ ಆನಂತರ ಗೊತ್ತಾಗಲಿದೆಯೆಂದು ಅವರು ಹೇಳಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡ 30 ಮಂದಿ ಗಾಯಾಳುಗಳನ್ನು ಕ್ವೆಟ್ಟಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 7 ಮಂದಿಯ ಪರಿಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.

   ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ. ತೈಲ ಹಾಗೂ ನೈಸರ್ಗಿಕ ಅನಿಲದಿಂದ ಸಮೃದ್ಧವಾಗಿರುವ ಬಲೂಚಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕವಾದಿಗಳು ಹಾಗೂ ವಿವಿಧ ಉಗ್ರಗಾಮಿಗುಂಪುಗಳು ಹಲವು ಬಾರಿ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾರೆ.

ಹೇಡಿತನದ ಕೃತ್ಯ: ಬಾಜ್ವಾ ಖಂಡನೆ

  ಪಾಕಿಸ್ತಾನದ ಸೇನಾ ವರಿಷ್ಠ ಜನರಲ್ ಜಾವೇದ್ ಕಮರ್ ಬಾಜ್ವಾ ಬಾಂಬ್ ಸ್ಫೋಟವನ್ನು ಬಲವಾಗಿ ಖಂಡಿಸಿದ್ದು, ಇದೊಂದು ಹೇಡಿತನದ ಕೃತ್ಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆಗೆ ಅಡ್ಡಿಪಡಿಸುವ ಪ್ರಯತ್ನವಾಗಿ ಈ ದಾಳಿ ನಡೆದಿದೆಯೆಂದು ಸೇನಾವರಿಷ್ಠರ ಕಾರ್ಯಾಲಯದ ಹೇಳಿಕೆ ತಿಳಿಸಿದೆ. ಈ ಪಾಕ್ ಸೇನೆಯ ದೃಢನಿರ್ಧಾರಕ್ಕೆ ಹಿನ್ನಡೆಯುಂಟಾಗಲು ಈ ದಾಳಿಯಿಂದ ಹಿನ್ನಡೆಯಾಗಲಾರದು ಎಂದು ಬಾಜ್ವಾ ಹೇಳಿರುವುದಾಗಿ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News