ಚಾರ್ಲೊಟ್ಸ್‌ವಿಲ್ಲೆ ನಗರದಲ್ಲಿ ಜನಾಂಗೀಯ ಹಿಂಸಾಚಾರ: 3 ಬಲಿ

Update: 2017-08-13 16:16 GMT

ಹೆಲಿಕಾಪ್ಟರ್ ಪತನಗೊಂಡು 2 ಪೊಲೀಸರ ಮೃತ್ಯು 

ವಾಶಿಂಗ್ಟನ್,ಆ.13: ಅಮೆರಿಕದ ವರ್ಜಿನಿಯಾ ರಾಜ್ಯದಲ್ಲಿ ಬಿಳಿಜನಾಂಗೀಯವಾದಿಗಳು ಹಾಗೂ ಎದುರಾಳಿ ಪ್ರತಿಭಟನಕಾರರ ನಡುವೆ ಶನಿವಾರ ಭುಗಿಲೆದ್ದ ಭೀಕರ ಘರ್ಷಣೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ ಇತರ 19 ಮಂದಿ ಗಾಯಗೊಂಡಿದ್ದಾರೆ.

   ಚಾರ್ಲೊಟ್ಸ್‌ವಿಲ್ಲೆ ನಗರದಲ್ಲಿರುವ ಗುಲಾಮಗಿರಿಯನ್ನು ಸಮರ್ಥಿಸಿದ್ದ ಎರಡನೆ ಮಹಾಯುದ್ಧ ಕಾಲದ ಅಮೆರಿಕದ ಸೇನಾ ಜನರಲ್ ರಾಬರ್ಟ್ ಇ.ಲೀನ ಪ್ರತಿಮೆಯನ್ನು ತೆರವುಗೊಳಿಸುವುದನ್ನು ಪ್ರತಿಭಟಿಸಿ ಬಿಳಿ ಜನಾಂಗೀಯವಾದಿಗಳು ಆಯೋಜಿಸಿದ್ದ ‘ಯುನೈಟ್ ದಿ ರೈಟ್’ (ಬಲಪಂಥೀಯರನ್ನು ಒಗ್ಗೂಡಿಸಿ) ರ್ಯಾಲಿಗೆ ಮುನ್ನ ಹಿಂಸಾಚಾರ ಸ್ಫೋಟಿಸಿತ್ತು.

 ಎರಡೂ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದ ಬಳಿಕ ಚಾರ್ಲೊಟ್ಸ್‌ವಿಲ್ಲೆ ನಗರದಲ್ಲಿ ತುರ್ತುಸ್ಥಿತಿಯನ್ನು ಘೋಷಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ.

ಬಿಳಿಜನಾಂಗೀಯರ ರ್ಯಾಲಿಯನ್ನು ವಿರೋಧಿಸಿ, ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದ ಗುಂಪೊಂದರ ಮೇಲೆ ದುಷ್ಕರ್ಮಿಯೊಬ್ಬ ಕಾರನ್ನು ನುಗ್ಗಿಸಿದ್ದರಿಂದ ಓರ್ವ ಮೃತಪಟ್ಟು ಹಲವರು ಗಾಯಗೊಂಡರು. ಕಾರಿನ ಚಾಲಕನನ್ನು ಬಂಧಿಸಲಾಗಿದ್ದು ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಗಿದೆ.

ಇದೇ ವೇಳೆ ಪ್ರತಿಭಟನೆಯ ಸ್ಥಳದಲ್ಲಿ ಗಸ್ತುತಿರುಗುತ್ತಿದ್ದ ಹೆಲಿಕಾಪ್ಟರೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅವಘಡದ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ ಹಾಗೂ ಈ ಬಗ್ಗೆ ತನಿಖೆ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಬಿಳಿಯಜನಾಂಗೀಯವಾದಿಗಳು ಹಾಗೂ ಎದುರಾಳಿ ಪ್ರತಿಭಟನಕಾರರ ನಡುವೆ ಘರ್ಷಣೆಯಿಂದಾಗಿ ಚಾರ್ಲೋಟ್‌ವಿಲೆ ನಗರ ರಣರಂಗವಾಗಿ ಪರಿಣಮಿಸಿತು. ಇತ್ತಡಂಗಳೂ ಪರಸ್ಪರ ಬಾಟಲಿಗಳನ್ನು ಎಸೆದವಲ್ಲದೆ, ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು.

 ಚಾರ್ಲೊಟ್ಸ್‌ವಿಲ್ಲೆ ಹಿಂಸಾಚಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದು, ಇದೊಂದು ಆಘಾತಕಾರಿ ಘಟನೆಯೆಂದು ಬಣ್ಣಿಸಿದ್ದಾರೆ.

ಬಿಳಿಯ ಜನಾಂಗೀಯವಾದ ಹಿಂಸಾಚಾರಕ್ಕೆ ಕಾರಣ: ವನಿತಾ ಗುಪ್ತಾ

  ನಾಗರಿಕ ಹಾಗೂ ಮಾನವಹಕ್ಕುಗಳ ನಾಯಕತ್ವ ಸಮಾವೇಶದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷೆಯಾದ ಭಾರತೀಯ ಸಂಜಾತೆ ಅಮೆರಿಕನ್ ವನಿತಾ ಗುಪ್ತಾ ಅವರು ಹಿಂಸಾಚಾರವನ್ನು ಖಂಡಿಸಿದ್ದು, ಬಿಳಿಜನಾಂಗೀಯವಾದಿಗಳು ಹೊಂದಿರುವ ದ್ವೇಷಪೂರಿತವಾದ ನಿಲುವು ಹಿಂಸಾಚಾರಕ್ಕೆ ಕಾರಣವಾಗಿದೆಯೆಂದು ಆರೋಪಿಸಿದ್ದಾರೆ.

ಬಿಳಿಯಜನಾಂಗೀಯವಾದಿಗಳ ಶನಿವಾರ ಆಯೋಜಿಸಿದ್ದ ರ್ಯಾಲಿಯನ್ನು ಅಡೆಮಾಕ್ರಾಟ್ ಪಕ್ಷದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಟಾಮ್ ಪೆರೆಝ್ ಖಂಡಿಸಿದ್ದಾರೆ. ಜನಾಂಗೀಯದ್ವೇಷಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲವೆಂದು ಅವರು ಹೇಳಿದ್ದಾರೆ. ಜನಾಂಗೀಯವಾದವು ಅಮೆರಿಕದ ಪ್ರಜಾಪ್ರಭುತ್ವ ಹಾಗೂ ಮಾನವತೆಯ ಮೇಲೆ ನಡೆದ ದಾಳಿಯಾಗಿದೆಯೆಂದು ಅವರು ಹೇಳಿದ್ದಾರೆ.

 ಒಬಾಮ ಕಳವಳ

       ಚಾರ್ಲೊಟ್ಸ್‌ವಿಲ್ಲೆ ನಗರದಲ್ಲಿ ಶನಿವಾರ ಬಿಳಿಜನಾಂಗೀಯವಾದಿಗಳು ಹಾಗೂ ಜನಾಂಗವಾದ ವಿರೋಧಿಗಳ ನಡುವೆ ನಡೆದ ಘರ್ಷಣೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು ಯಾವ ವ್ಯಕ್ತಿಯೂ ತನ್ನ ಚರ್ಮದ ಬಣ್ಣ ಅಥವಾ ತನ್ನ ಹಿನ್ನೆಲೆ ಅಥವಾ ತನ್ನ ಧರ್ಮದ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸಲೆಂದು ಹುಟ್ಟುವುದಿಲ್ಲ’’ ಎಂದು ಅವರು ದಕ್ಷಿಣ ಆಫ್ರಿಕದ ಜನಾಂಗೀಯವಾದ ವಿರೋಧಿ ರಾಜಕಾರಣಿ ನೆಲ್ಸನ್ ಮಂಡೇಲಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News