ತನ್ನದೇ ನಿಜವಾದ ಜೆಡಿಯು: ಶರದ್ ಯಾದವ್

Update: 2017-08-13 16:24 GMT

ಪಾಟ್ನ, ಆ.13: ತನ್ನ ನಾಯಕತ್ವದ ಜೆಡಿಯು ಬಣಕ್ಕೆ ಹಲವಾರು ರಾಜ್ಯಘಟಕಗಳ ಬೆಂಬಲವಿದ್ದು ಅದುವೇ ನಿಜವಾದ ಸಂಯುಕ್ತ ಜನತಾದಳ(ಜೆಡಿಯು) ಎಂದು ಘೋಷಿಸಿರುವ ಹಿರಿಯ ಮುಖಂಡ ಶರದ್ ಯಾದವ್, ನಿತೀಶ್ ಕುಮಾರ್ ಅವರ ಪ್ರಭಾವ ಬಿಹಾರಕ್ಕಷ್ಟೇ ಸೀಮಿತವಾಗಿದೆ ಎಂದಿದ್ದಾರೆ.

 ಇಬ್ಬರು ರಾಜ್ಯಸಭಾ ಸಂಸದರು ಹಾಗೂ ಕೆಲವು ರಾಷ್ಟ್ರೀಯ ಪದಾಧಿಕಾರಿಗಳ ಬೆಂಬಲ ತಮಗಿದೆ. ಅಲ್ಲದೆ 14 ರಾಜ್ಯಘಟಕಗಳ ಅಧ್ಯಕ್ಷರು ಲಿಖಿತವಾಗಿ ಬೆಂಬಲ ಘೋಷಿಸಿದ್ದಾರೆ ಎಂದು ಯಾದವ್ ಅವರ ನಿಕಟವರ್ತಿ ಅರುಣ್ ಶ್ರೀವಾಸ್ತವ ಹೇಳಿದ್ದಾರೆ.

 ಜೆಡಿಯು ಪಕ್ಷಕ್ಕೆ ಬಿಹಾರದಲ್ಲಿ ಮಾತ್ರ ಅಸ್ತಿತ್ವವಿದೆ ಎಂಬ ನಿತೀಶ್ ಕುಮಾರ್ ಹೇಳಿಕೆಯನ್ನು ತಳ್ಳಿಹಾಕಿದ ಶ್ರೀವಾಸ್ತವ, ಪಕ್ಷವು ಯಾವತ್ತಿಗೂ ರಾಷ್ಟ್ರೀಯ ನೆಲೆಗಟ್ಟನ್ನು ಹೊಂದಿರುತ್ತದೆ ಎಂದರು. ನಿತೀಶ್ ಕುಮಾರ್ ತಮ್ಮ ಸಮತಾ ಪಕ್ಷವನ್ನು ಜೆಡಿಯು ಜೊತೆ ವಿಲೀನಗೊಳಿಸಿದಾಗ ಶರದ್ ಯಾದವ್ ಜೆಡಿಯು ಮುಖ್ಯಸ್ಥರಾಗಿದ್ದರು ಎಂಬುದನ್ನು ನಿತೀಶ್ ಕುಮಾರ್ ಮರೆಯಬಾರದು ಎಂದವರು ಹೇಳಿದರು.

  ನಾವು ಪಕ್ಷವನ್ನು ತೊರೆಯುವುದಿಲ್ಲ. ಬಿಹಾರದ ಹೊರಗೆ ಜೆಡಿಯುಗೆ ಅಸ್ತಿತ್ವವಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಹಾಗಿದ್ದರೆ ಅವರು ಬಿಹಾರದಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಲಿ. ರಾಷ್ಟ್ರೀಯ ಪಕ್ಷವಾದ ಜೆಡಿಯುವನ್ನು ಕೈವಶ ಮಾಡಿಕೊಳ್ಳುವ ಪ್ರಯತ್ನವನ್ನು ಅವರು ಕೈಬಿಡಲಿ ಎಂದು ಶ್ರೀವಾಸ್ತವ ಹೇಳಿದರು.

ಮೂಲ ಜನತಾದಳ ಈಗಾಗಲೇ ಹಲವಾರು ಹೋಳುಗಳಾಗಿ ಒಡೆದಿದೆ. ಇದೀಗ, ಪಕ್ಷದಿಂದ ಆರಿಸಿಬಂದಿರುವ ಜನಪ್ರತಿನಿಧಿಗಳ ಕಡಿಮೆ ಬೆಂಬಲ ಇದ್ದಾಗ್ಯೂ (ಇವರಲ್ಲಿ ಬಹುತೇಕ ಜನಪ್ರತಿನಿಧಿಗಳು ಬಿಹಾರದಿಂದ ಆಯ್ಕೆಯಾದವರು) , ಜೆಡಿಯು ಪಕ್ಷವನ್ನು ಒಡೆದು ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳುವ ಇರಾದೆ ಶರದ್ ಯಾದವ್ ಅವರದ್ದಾಗಿದೆ ಎನ್ನಲಾಗುತ್ತಿದೆ.

ಈ ಮಧ್ಯೆ, ರಾಜ್ಯಸಭೆಯಲ್ಲಿ ಪಕ್ಷದ ಮುಖಂಡನ ಸ್ಥಾನದಿಂದ ಶರದ್ ಯಾದವ್‌ರನ್ನು ಕೆಳಗಿಳಿಸುವ ಮೂಲಕ ಯಾದವ್ ಜೊತೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ಇಚ್ಚೆ ತನಗಿಲ್ಲ ಎಂಬ ಸ್ಪಷ್ಟ ಸಂಕೇತವನ್ನು ನಿತೀಶ್ ನೀಡಿದ್ದಾರೆ.

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ನನ್ನ ವೈಯಕ್ತಿಕ ನಿರ್ಧಾರವಲ್ಲ. ಇದು ಪಕ್ಷದ ನಿರ್ಧಾರ. ಈಗ ತನ್ನ ಸ್ವಂತ ನಿರ್ಧಾರ ಕೈಗೊಳ್ಳಲು ಶರದ್ ಸ್ವತಂತ್ರರು ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News