ಉ.ಕೊರಿಯದಲ್ಲಿ ಒಂದು ಗುಟುಕಿನಷ್ಟೂ ಸ್ವಾತಂತ್ರ್ಯವಿಲ್ಲ

Update: 2017-08-13 17:06 GMT

ವಾಶಿಂಗ್ಟನ್,ಆ.13: ಉತ್ತರ ಕೊರಿಯದಲ್ಲಿ ಒಂದು ಗುಟುಕಿನಷ್ಟೂ ಸ್ವಾತಂತ್ರವಿಲ್ಲ. ಅಲ್ಲಿಯ ಜನತೆಯನ್ನು ಸೈನಿಕರನ್ನಾಗಿಯೇ ಬೆಳೆಸಲಾಗುತ್ತಿದೆ ಎಂದು ಆ ದೇಶದ ರಾಜಧಾನಿ ಯೊಂಗ್‌ಯಾಂಗ್‌ನಲ್ಲಿ ಮಾರುವೇಷದಲ್ಲಿ ವಾಸವಾಗಿದ್ದ ಪತ್ರಕರ್ತೆಯೊಬ್ಬರು ಬಹಿರಂಗಪಡಿಸಿದ್ದಾರೆ. ಉತ್ತರ ಕೊರಿಯದ ಜನರ ಬದುಕನ್ನು , ದೇಶದ ಪರಮೋಚ್ಛ ನಾಯಕ ಕಿಮ್ ಜೊಂಗ್ ಉನ್‌ರ ಹಿತಾಸಕ್ತಿಗನುಗುಣವಾಗಿ ರೂಪಿಸಲಾಗುತ್ತಿದೆ. ಅಲ್ಲಿನ ಜನತೆಗೆ ಹೊರದೇಶದಿಂದ ಬರುವ ಯಾವುದೇ ಮಾಹಿತಿಯನ್ನು ಸಂಪೂರ್ಣ ನಿಷೇಧಿಸಲಾಗಿದೆಯೆಂದು ಪತ್ರಕರ್ತೆ ಸುಕಿ ಕಿಮ್, ತನ್ನ ವಿದೌಟ್ ಯು ದೇರ್ ಇಸ್ ನೋ ಅಸ್’ ಕೃತಿಯಲ್ಲಿ ಬರೆದಿದ್ದಾರೆ. ಕ್ರೈಸ್ತ ಮಿಶನರಿಯಾಗಿ ಹಾಗೂ ಯೊಂಗ್‌ಯಾಂಗ್ ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದ ಉಪನ್ಯಾಸಕಿಯ ಸೋಗಿನಲ್ಲಿ ನೆಲೆಸಿದ್ದರು.

ಉತ್ತರ ಕೊರಿಯದ ಜನತೆ ಅತ್ಯಂತ ಮಾನವೀಯತೆಯ ಗುಣವುಳ್ಳವರಾಗಿದ್ದರೆ ಹಾಗೂ ಉತ್ತಮ ನಡತೆಯನ್ನು ಹೊಂದಿದವರಾಗಿದ್ದಾರೆ. ಆದರೆ ಸರ್ವಾಧಿಕಾರಿ ಆಡಳಿತವು ಭಾವನಾತ್ಮಕವಾಗಿ ಮತ್ತು ಬೌದ್ಧಿಕವಾಗಿ ಏಕಾಂಗಿಗಳನ್ನಾಗಿ ಮಾಡಲಾಗಿದೆಯೆದಂು ಆಕೆ ಬಣ್ಣಿಸಿದ್ದಾರೆ.

  ವಿಶ್ವದ ಅತಿ ದೊಡ್ಡ ಸೇನೆಯನ್ನು ಹೊಂದಿರುವ ದೇಶಗಳಲ್ಲೊಂದಾದ ಉತ್ತರ ಕೊರಿಯದಲ್ಲಿ ಇಡೀ ಸಂವಹನ ವ್ಯವಸ್ಥೆ ಮಿಲಿಟರಿಯ ನಿಯಂತ್ರಣದಲ್ಲಿದೆ. ಅಚ್ಚರಿಯೆಂದರೆ ವಿಶ್ವದಲ್ಲಿ ಕಂಪ್ಯೂಟರ್ಸ್‌ ವಿಷಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ವ್ಯವಸ್ಥೆಯು ಅಸ್ತಿತ್ವದಲ್ಲಿರುವುದು ತಿಳಿದೇ ಇಲ್ಲವೆಂದು ಸುಕಿ ಕಿಮ್ ಹೇಳಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಕಣ್ಗಾವಲು ವ್ಯವಸ್ಥೆಗೊಳಪಡಿಸಲಾಗಿದೆ ಎಂದು ಆಕೆ ತನ್ನ ಕೃತಿಯಲ್ಲಿ ಬರೆದಿದ್ದಾರೆ.

ಕಿಮ್ ಹೇಳುವ ಪ್ರಕಾರ ಉತ್ತರ ಕೊರಿಯದ ನಾಗರಿಕರಿಗೆ ಕೇವಲ ಒಂದೇ ಒಂದು ದಿನ ಪತ್ರಿಕೆ ಹಾಗೂ ಒಂದು ಟಿವಿ ವಾಹಿನಿ ಮಾತ್ರವೇ ಲಭ್ಯವಿದೆ. ಟಿವಿ ವಾಹಿನಿಯು ದಿನವಿಡೀ ತಮ್ಮ ನಾಯಕನಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರ ಮಾಡುತ್ತಿರುತ್ತದೆಯೆಂದು ಸುಕಿ ಕಿಮ್ ತಿಳಿಸಿದ್ದಾರೆ.

ಉತ್ತರ ಕೊರಿಯ ಜಗತ್ತಿನ ಅತ್ಯಂತ ದುಃಖಿತ ಸ್ಥಳವಾಗಿದೆ. ಅಲ್ಲಿನ ಜನತೆಗೆ ದೇಶದ ಹೊರಗೆ ಪ್ರಯಾಣಿಸಲೂ ಅವಕಾಶ ನೀಡಲಾಗುತ್ತಿಲ್ಲ. ಆ ದೇಶವು ಸಾಧಿಸಿರುವ ಅಣ್ವಸ್ತ್ರ ಸಾಮರ್ಥ್ಯವು ಅಲ್ಲಿನ ಜನತೆಯನ್ನು ದಾಸ್ಯದೆಡೆಗೆ ದೂಡಿದೆಯೆಂದು ಆಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News