9 ತಿಂಗಳ ಶಿಶುವಿನ ಶವವನ್ನು ರಿಕ್ಷಾದಲ್ಲಿ ಕೊಂಡೊಯ್ಯಲು ಹೇಳಿದ ಆಸ್ಪತ್ರೆ ಸಿಬ್ಬಂದಿ

Update: 2017-08-13 17:16 GMT

ಲಕ್ನೋ, ಆ. 13: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಏರ್ಪಡಿಸಲಾದ ಭದ್ರತೆಗೆ ಅಡ್ಡಿ ಉಂಟಾಗುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ 9 ತಿಂಗಳ ಶಿಶುವಿನ ಶವವನ್ನು ಆಟೋದಲ್ಲಿ ಕೊಂಡೊಯ್ಯಲು ತಂದೆಯನ್ನು ಬಲವಂತಪಡಿಸಿದ ಆಘಾತಕಾರಿ ಘಟನೆ ರವಿವಾರ ನಡೆದಿದೆ.

ಕಳೆದ ಒಂದು ವಾರದಿಂದ ಆಮ್ಲಜನಕದ ಕೊರತೆಯಿಂದ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 79 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನಿಗದಿ ಮಾಡಲಾಗಿತ್ತು.

  ನ್ಯೂಸ್ ನ್ಯಾಶನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೃತ ಶಿಶುವಿನ ತಂದೆ, ಶವ ಕೊಂಡೊಯ್ಯಲು ಆ್ಯಂಬುಲೆನ್ಸ್ ನೀಡಲು ನಿರಾಕರಿಸಿದರು. ಬದಲಾಗಿ ಆಟೋರಿಕ್ಷಾದಲ್ಲಿ ಕೊಂಡೊಯ್ಯಲು ಬಲವಂತಪಡಿಸಿದರು ಎಂದಿದ್ದಾರೆ.

 ನನ್ನ 9 ತಿಂಗಳ ಮಗುವಿನ ಶವವನ್ನು ಆ ಆಸ್ಪತ್ರೆಯಿಂದ ಕೊಂಡೊಯ್ಯುವಂತೆ ಮಹಿಳಾ ವೈದ್ಯರೊಬ್ಬರು ಹೇಳಿದರು. ನನಗೆ ದಿಕ್ಕೇ ತೋಚಲಿಲ್ಲ. ಬಳಿಕ ಶವವನ್ನು ಆಟೋರಿಕ್ಷಾದಲ್ಲಿ ಕೊಂಡೊಯ್ದು ದಫನ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಗೋರಕ್ ಪುರ ದುರಂತಕ್ಕೆ ಸಂಬಂದಿಸಿ ಕಾಂಗ್ರೆಸ್ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದೆ. ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News