ಇಬ್ಬರನ್ನು ರೈಲಿನಿಂದ ಹೊರಗೆಸೆದ ಪ್ರಯಾಣಿಕರು: ಓರ್ವನ ಸಾವು, ಓರ್ವ ಗಂಭೀರ
Update: 2017-08-13 22:50 IST
ಹೊಸದಿಲ್ಲಿ, ಆ. 13: ದಿಲ್ಲಿ-ಬಲ್ಲಾಭ್‌ಗಡದ ನಡುವೆ ಸಂಚರಿಸುತ್ತಿದ್ದ ರೈಲಿನಿಂದ ಇಬ್ಬರು ವ್ಯಕ್ತಿಗಳನ್ನು ಹೊರಗೆಸೆದ ಘಟನೆ ಶನಿವಾರ ರಾತ್ರಿ ನಡೆದಿದೆ.
ಇವರಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ ಮೃತಪಟ್ಟಿದ್ದಾರೆ. ಗಾಯಗೊಂಡ ಇನ್ನೋರ್ವನನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಥುರಾಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಶನಿವಾರ ರಾತ್ರಿ 10ರಿಂದ 11 ಗಂಟೆ ನಡುವೆ ಆಸನಕ್ಕಾಗಿ ಕೆಲವು ಪ್ರಯಾಣಿಕರ ನಡುವೆ ಗಲಾಟೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಪ್ರಯಾಣಿಕರನ್ನು ರೈಲಿನಿಂದ ಹೊರಗೆ ಎಸೆಯಲಾಗಿದೆ. ಇವರಿಬ್ಬರೂ ಅಸವತಿ ಸಮೀಪದ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.