ಕಾವ್ಯಾ ಪ್ರಕರಣ: ಉನ್ನತ ತನಿಖೆಗೆ ಆಗ್ರಹಿಸಿ ಜಾಥಾ

Update: 2017-08-14 09:08 GMT

ಉಡುಪಿ, ಆ.14: ಮೂಡಬಿದ್ರೆ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಳ ಅಸಹಜ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜಯ ಕರ್ನಾಟಕ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಉಡುಪಿ ನಗರದಲ್ಲಿ ಪ್ರತಿ ಭಟನಾ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಜಾಥಾದಲ್ಲಿ ವಿದ್ಯಾರ್ಥಿಗಳು, ಆಶ್ರಯದಾತ ರಿಕ್ಷಾ ಚಾಲಕ ಹಾಗೂ ಮಾಲಕರು ಪಾಲ್ಗೊಂಡಿದ್ದರು. ಜಾಥವು ಕೋರ್ಟ್ ರಸ್ತೆ, ಡಯಾನ ಸರ್ಕಲ್, ಕೆ.ಎಂ.ಮಾಗವಾರ್ಗಿ ಸರ್ವಿಸ್ ಬಸ್ ನಿಲ್ದಾಣ ತಲುಪಿತು.

ತದನಂತರ ಕ್ಲಾಕ್ ಟವರ್ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ರಮೇಶ್ ಶೆಟ್ಟಿ, ಕಾವ್ಯಾಳ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳಿದ್ದು, ಇದಕ್ಕೆ ಕಾರಣವಾಗಿರುವ ದೈಹಿಕ ಶಿಕ್ಷಕ ರನ್ನು ಮಂಪರು ಪರೀಕ್ಷೆ ಒಳಪಡಿಸಬೇಕು. ಇದರಿಂದ ಮಾತ್ರ ನಿಜಾಂಶ ಹೊರ ಬರಲು ಸಾಧ್ಯ ಎಂದು ಒತ್ತಾಯಿಸಿದರು.

ಜಯ ಕರ್ನಾಟಕ ಗೌರವ ಸಲಹೆಗಾರ ಸುಧಾಕರ ಮಾತನಾಡಿ, ಕ್ರೀಡಾ ಪಟು ಕಾವ್ಯಳ ಅಸಹಜ ಸಾವು ಸಂಭವಿಸಿ ಹಲವು ದಿನಗಳ ಕಳೆದರೂ ನಿಜಾಂಶ ಇನ್ನೂ ನಿಗೂಢವಾಗಿಯೇ ಇದೆ. ರಾಜಕೀಯ ಒತ್ತಡದಿಂದ ಸಾವಿನ ನಿಜಾಂಶ ಬಹಿರಂಗವಾಗುತ್ತಿಲ್ಲ. ಆದುದರಿಂದ ಸರಕಾರ ಕೂಡಲೇ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದರು.

ಬಳಿಕ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿವರೆಗೆ ವಾಹನ ಜಾಥ ನಡೆಸಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಪೂಜಾರಿ, ಕಾರ್ಯದರ್ಶಿ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಜಿಲ್ಲಾ ವಕ್ತಾರ ಎಸ್.ಎಸ್.ತೋನ್ಸೆ, ಜಿಲ್ಲಾ ಪ್ರಧಾನ ಸಂಚಾಲಕ ಅಣ್ಣಪ್ಪ ಕುಲಾಲ್, ಉಪಾಧ್ಯಕ್ಷ ಶರತ್ ಶೆಟ್ಟಿ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News