ಮಕ್ಕಳ ಕೈಗೆ ತಟ್ಟೆ ಕೊಡಿಸುವ ಬದಲು ಅಕ್ಷರ ದಾಸೋಹಕ್ಕೆ ಅರ್ಜಿ ಕೊಡಿಸಿ

Update: 2017-08-14 09:29 GMT
ಸಚಿವ ರೈ

ಮಂಗಳೂರು, ಆ.14: ಮಕ್ಕಳ ಹೊಟ್ಟೆಗೆ ಕನ್ನ ಹಾಕಲಾಗಿದೆ ಎಂದು ಆರೋಪಿಸುತ್ತಾ ಮಕ್ಕಳ ಕೈಗೆ ತಟ್ಟೆ ಕೊಟ್ಟು ಭಿಕ್ಷೆ ಬೇಡಿಸುವ ಬದಲು ಪ್ರಭಾಕರ ಭಟ್‌ರವರು ಶಾಲೆಗೆ ಸರಕಾರದಿಂದ ಅಕ್ಷರ ದಾಸೋಹಕ್ಕಾಗಿ ಅರ್ಜಿ ಕೊಡಿಸುವ ಕೆಲಸ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸವಾಲು ಹಾಕಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು, ಕಲ್ಕಡ್ಕದ ಶ್ರೀರಾಮ ಪ್ರೌಢಶಾಲೆ ಹಾಗೂ ಶ್ರೀದೇವಿ ಪ್ರೌಢ ಶಾಲೆಗಳಿಗೆ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ನೀಡಲಾಗುತ್ತಿದ್ದ ನೆರವನ್ನು ಸ್ಥಗಿತಗೊಳಿಸಲಾಗಿರುವ ಕುರಿತಂತೆ ಉಂಟಾಗಿರುವ ಆರೋಪಗಳಿಗೆ ಅವರು ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದರು.

ಶಾಲೆಗಳಿಗೆ ಧಾರ್ಮಿಕ ಪರಿಷತ್ತಿನಿಂದ ಮಧ್ಯಾಹ್ನದ ಊಟಕ್ಕಾಗಿ ನೀಡಲಾಗುತ್ತಿದ್ದ ನೆರವನ್ನು ಸ್ಥಗಿತಗೊಳಿಸುವುದನ್ನು ವಿವಾದಗೊಳಿಸಲಾಗಿದೆ. ಆದರೆ ಕಾನೂನು ಪ್ರಕಾರ ದೇವಸ್ಥಾನಗಳಿಂದ ನಡೆಸುವ ಶಾಲೆಗಳಿಗೆ ಹೊರತುಪಡಿಸಿ ಅನುದಾನಿತ ಅಥವಾ ಖಾಸಗಿ ಶಾಲೆಗಳಿಗೆ ಈ ನೆರವನ್ನು ನೀಡುವಂತಿಲ್ಲ. ಆದರೆ ಈ ಶಾಲೆಗಳಿಗೆ ನಿಯಮಬಾಹಿರವಾಗಿ ಕಳೆದ ಕೆಲವು ವರ್ಷಗಳಿಂದ ಈ ನೆರವನ್ನು ನೀಡಲಾಗುತ್ತಿತ್ತು. ಅದರಲ್ಲೂ ದೇವಾಲಯದಿಂದ ಈ ಎರಡು ಶಾಲೆಗಳಿಗೆ ನೆರವು ನೀಡಲಾಗುತ್ತಿದುದು ಹಣದ ರೂಪದಲ್ಲಿಯೇ ಹೊರತು ಆಹಾರದ ರೂಪದಲ್ಲಿ ಅಲ್ಲ ಎಂದು ಅವರು ಹೇಳಿದರು.

ಹಾಲಿವುಡ್, ಬಾಲಿವುಡ್ ಸಿನೆಮಾ ನಟರಿಂದ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಜನಾರ್ದನ ರೆಡ್ಡಿ ಸೇರಿದಂತೆ ಸಾಕಷ್ಟು ರೂಪದಲ್ಲಿ ದೇಣಿಗೆಯನ್ನು ಪಡೆಯುತ್ತಿರುವ ಶ್ರೀರಾಮ ಪ್ರೌಢಶಾಲೆಗೆ ಬಿಸಿಯೂಟದ ವ್ಯವಸ್ಥೆ ಬೇಕಿದ್ದಲ್ಲಿ ಅವರು ಅರ್ಜಿ ನೀಡಲಿ. ಅದನ್ನು ಕೊಡಿಸುವ ವ್ಯವಸ್ಥೆಯನ್ನು ಸಚಿವನಾಗಿ ನಾನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಬಿಸಿಯೂಟ ಪಡೆಯುವ ಅವಕಾಶವಿದ್ದರೂ ಶಾಲೆಯಿಂದ ಆ ವ್ಯವಸ್ಥೆಯನ್ನು ಬೇಡವೆನ್ನಲಾಗಿದೆ. ಆದರೆ ಹಣದ ರೂಪದಲ್ಲಿ ಕಾನೂನುಬಾಹಿರವಾಗಿ ದೇವಸ್ಥಾನದಿಂದ ನೆರವನ್ನು ಪಡೆಯಲಾಗುತ್ತಿದೆ. ಈ ವ್ಯವಸ್ಥೆಯನ್ನಷ್ಟೇ ಧಾರ್ಮಿಕ ದತ್ತಿ ಇಲಾಖೆ ನಿಲ್ಲಿಸಿದೆ. ಇದು ರಾಜ್ಯದ ಹಲವಾರು ಶಾಲೆಗಳಿಗೂ ಅನ್ವಯವಾಗುತ್ತದೆ. ಇದೇನು ದ್ವೇಷದಿಂದ ಸರಕಾರ ಮಾಡಿರುವ ಕ್ರಮವಲ್ಲ. ಇದನ್ನು ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರು ಗಮನಿಸಬೇಕು. ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಶೂ, ಸೈಕಲ್ ಎಲ್ಲವನ್ನೂ ನೀಡಲಾಗುತ್ತದೆ. ಕಲ್ಲಡ್ಕದಲ್ಲೂ 100 ಮೀಟರ್ ಅಂತರದಲ್ಲಿಯೇ ಸರಕಾರಿ ಶಾಲೆ ಇದೆ. ಪೋಷಕರು ಮಕ್ಕಳನ್ನು ಅಲ್ಲಿಗೆ ಸೇರಿಸಲಿ. ಅದು ಬಿಟ್ಟು,ಮತೀಯವಾದದ ಪ್ರಯೋಗಶಾಲೆಯಾಗಿ ಕಾರ್ಯ ನಿರ್ವಹಿಸುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದರಲ್ಲೂ ಅರ್ಥವಿಲ್ಲ ಎಂದು ಅವರು ಆಕ್ಷೇಪಿಸಿದರು.

ದೇವಸ್ಥಾನದಿಂದ ಹಣದ ರೂಪದಲ್ಲಿ ಪಡೆದ ನೆರವನ್ನು ದುರುಪಯೋಗ ಪಡಿಸಲಾಗಿರುವ ಕುರಿತಂತೆಯೂ ತನಿಖೆ ಆಗಬೇಕಾಗಿದೆ. ಮಾತ್ರವಲ್ಲದೆ, ಶ್ರೀರಾಮ ಪ್ರೌಢಶಾಲೆಯ ಶಿಕ್ಷಕರಿಗೆ ಸರಕಾರದಿಂದ ವೇತನವನ್ನು ನೀಡಲಾಗುತ್ತಿದೆ. ಸರಕಾರದಿಂದ ವೇತನ ಪಡೆಯುತ್ತಿರುವವರೇ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಸಚಿವ ರೈ ಹೇಳಿದರು.

ಗೋಷ್ಠಿಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ನಾಯಕರಾದ ಸುರೇಶ್ ಬಳ್ಳಾಲ್, ಶಶಿಧರ ಹೆಗ್ಡೆ, ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಎ.ಸಿ. ಭಂಡಾರಿ ಉಪಸ್ಥಿತರಿದ್ದರು.

ಬಡವರ ಹೊಟ್ಟೆಗೆ ಕನ್ನ ಹಾಕಿದ್ದು ಪ್ರಭಾಕರ್ ಭಟ್!
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಹೊಟ್ಟೆಗೆ ಕನ್ನ ಹಾಕುವ ಕೆಲಸ ಮಾಡಿಲ್ಲ. ಅದನ್ನು ಮಾಡಿದ್ದು ಪ್ರಭಾಕರ ಭಟ್, ಸರಕಾರದಿಂದ ಸಿಗುವ ಬಿಸಿಯೂಟವನ್ನು ನಿರಾಕರಿಸುವ ಮೂಲಕ ಎಂದು ಸಚಿವ ರೈ ಆರೋಪಿಸಿದರು.

ಇದೀಗ ಮಕ್ಕಳನ್ನು ತಟ್ಟೆ ಹಿಡಿಸಿ ಬೇಡಿಸುವ ಮೂಲಕ ಶಾಲೆಗೆ ಮತ್ತಷ್ಟು ದೇಣಿಗೆಯನ್ನು ಪಡೆಯಲು ಪ್ರಯತ್ನ ನಡೆಸಲಾಗಿದೆ. ದೇವಸ್ಥಾನದಿಂದ ನೆರವು ನೀಡಲಾಗುತ್ತಿತ್ತೇ ವಿನಹ ಅದು ಅನುದಾನವಲ್ಲ ಎಂದು ಅವರು ಹೇಳಿದರು.

ಧಾರ್ಮಿಕ ಪರಿಷತ್ತಿನ ಮೂಲಕವೇ ದೇವಸ್ಥಾನಗಳಿಂದ ಅನುದಾನಿತ ಶಾಲೆಗಳಿಗೆ ಕಾನೂನುಬಾಹಿರವಾಗಿ ನೀಡಲಾಗುವ ನೆರವನ್ನು ಸ್ಥಗಿತಗೊಳಿಸಲಾಗಿದೆ. ಹಲವಾರು ಪ್ರಕ್ರಿಯೆಗಳ ಮೂಲಕವೇ ಈ ಕಾರ್ಯ ನಡೆಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರೈ ಪ್ರತಿಕ್ರಿಯಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News