ಜೆಡಿಯುನಲ್ಲಿ ಭಿನ್ನಮತದ ಬಿರುಗಾಳಿ: 21 ಶರದ್ ಯಾದವ್ ಬೆಂಬಲಿಗರ ಅಮಾನತು

Update: 2017-08-14 14:21 GMT

ಪಟ್ನಾ,ಆ.14: ಮಹಾಮೈತ್ರಿಯನ್ನು ಮುರಿದು ಬಿಜೆಪಿ ಜೊತೆ ಕೈಜೋಡಿಸುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿರ್ಧಾರನನ್ನು ಬಲವಾಗಿ ವಿರೋಧಿಸಿದ್ದ ಶರದ್‌ಯಾದವ್ ಅವರ ನಿಷ್ಠಾವಂತ ಬೆಂಬಲಿಗರೆಂದು ಪರಿಗಣಿಸಲಾದ 21 ಮಂದಿ ನಾಯಕರನ್ನು ಜೆಡಿಯು ಸೋಮವಾರ ಪಕ್ಷದಿಂದ ಅಮಾನತುಗೊಳಿಸಿದೆ.

 ಬಿಹಾರ ಜೆಡಿಯು ಅಧ್ಯಕ್ಷ ಬಸಿಷ್ಠ ನಾರಾಯಣ್ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ವತ್ಯದಿಂದ ಅಮಾನತುಗೊಳಿಸಿದ ಈ ನಾಯಕರಲ್ಲಿ ಬಿಹಾರ ಸರಕಾರದ ಮಾಜಿ ಸಚಿವ ರಮಾಯಿ ರಾಮ್, ಶಿಯೊಹಾರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅರ್ಜುನ್ ರಾಯ್, ಮಾಜಿ ಶಾಸಕ ರಾಜ್ ಕಿಶೋರ್ ಸಿನ್ಹಾ ಹಾಗೂ ಮಾಜಿ ಎಂಎಲ್‌ಸಿ ವಿಜಯ್ ವರ್ಮಾ ಪ್ರಮುಖರು.

 ಇವರ ಜೊತೆಗೆ ‘ಪಕ್ಷವಿರೋಧಿ’ ಚಟುವಟಿಕೆಗಳಲ್ಲಿ ನಿರತರಾಗಿರುವ ಆರೋಪದಲ್ಲಿ ಜೆಡಿಯು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಕೂಡಾ ಅಮಾನತುಗೊಳಿಸಲಾಗಿದೆಯೆಂದು ಹೇಳಿಕೆ ತಿಳಿಸಿದೆ.

ಬಿಜೆಪಿ ಜೊತೆ ನಿತೀಶ್‌ಕುಮಾರ್ ಅವರ ಮೈತ್ರಿಯನ್ನು ವಿರೋಧಿಸಿ ಶರದ್‌ಯಾದವ್ ಕೈಗೊಂಡಿದ್ದ ‘ಸಂವಾದ ಯಾತ್ರೆ’ ಆಗಸ್ಟ್ 12ರಂದು ಸಮಾರೋಪಗೊಂಡಿತ್ತು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕಳೆದ ವಾರ ಹೊಸದಿಲ್ಲಿಯಲ್ಲಿ ಕರೆದಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸಂಸದ ಅಲಿ ಅನ್ವರ್ ಅವರನ್ನು ಕೂಡಾ ಜೆಡಿಯು ಅಮಾನತುಗೊಳಿಸಿದೆ.

ಇಂದು ಅಮಾನತುಗೊಂಡಿರುವ 21 ಮಂದಿ ಜೆಡಿಯು ನಾಯಕರು ಶರದ್‌ಯಾದವ್ ಜೊತೆ ಸಂವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರಾಗಿದ್ದರು.

ಈ ಮಧ್ಯೆ ಜೆಡಿಯು ಅಧ್ಯಕ್ಷರೂ ಆಗಿರುವ ನಿತೀಶ್ ಕುಮಾರ್ ಆಗಸ್ಟ್ 19ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದು ಅದರಲ್ಲಿ ಶರದ್ ಯಾದವ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News