ಗೇರಸಪ್ಪಾ ರೆತ, ಕಾರ್ಮಿಕರ ಸ್ವಾಭಿಮಾನದ ಸ್ಮಾರಕ ಕರ್ನಲ್ ಹಿಲ್
ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66ನ್ನು ಬಳಸಿ ಗೋವಾದೆಡೆ ಹೊರಟಾಗ ಬಲ ಭಾಗದ ಎತ್ತರದ ಗುಡ್ಡದ ಮೇಲೆ ಈ ಕಂಬ ಕಾಣುತ್ತದೆ. ಎತ್ತರವಾಗಿ ಎಲ್ಲರ ಗಮನ ಸೆಳೆಯುವ ಈ ಸ್ಮಾರಕ ಬ್ರಿಟಿಷ್ ಸೈನಿಕ ಕರ್ನಲ್ ಕ್ಲೆಮೆಟ್ ಹಿಲ್‌ನ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇದುವರೆಗೆ ಈ ಕಂಬ ಭಾರತದಲ್ಲಿ ಪ್ರಾಣಬಿಟ್ಟ ಬ್ರಿಟಿಷ್ ಸೈನಿಕನ ಸ್ಮಾರಕ ಎಂದು ಗುರುತಿಸಲಾಗುತ್ತಿತ್ತು. ಆದರೆ ವಸಾಹತುಶಾಹಿಯನ್ನು ಆಳವಾಗಿ ಅಧ್ಯಯನ ಮಾಡುತ್ತಿ ರುವ ಚರಿತೆಗಾರರು ಅದನ್ನು ಸ್ಥಳೀಯರ ಸ್ವಾಭಿಮಾನ ಸಾರುವ ಸ್ಮಾರಕ ಎಂದು ಹೇಳುತ್ತಾರೆ. ಈ ಕುರಿತು ಚರಿತ್ರೆಕಾರ ಡಾ. ಸುರೇಶ ತಾಂಡೆಲ್ ಕಂಬದ ಕೆಳಗೆ ಇಂಗ್ಲಿಷರ ಸಿಪಾಯಿಯ ಹೆಣ ಇರಬ ಹುದು. ಆದರೆ ಆ ಕಂಬ ನಿರ್ಮಿಸುವಂತೆ ಮಾಡಿದ ಗೇರಸಪ್ಪಾದ ಶ್ರಮಜೀವಿಗಳು-ರೈತ ಕಾರ್ಮಿಕರುಸದಾ ನೆನಪಾಗುತ್ತಾರೆ. ಅದಾಗಲೇ ಪೋರ್ಚುಗೀಸರನ್ನು ಕರಾವಳಿಯಿಂದ ಓಡಿಸಿದ ಸಾಳ್ವರಾಣಿಯರು ಸ್ವಾಭಿಮಾನದ ಕಿಚ್ಚನ್ನು ಗೇರಸಪ್ಪಾ ಕರಾವಳಿಯಲ್ಲಿ ಬಿತ್ತಿದ್ದರು. ಅದರ ಪರಿಣಾಮ ವಾಗಿ ಸ್ಥಳೀಯರನ್ನು ಸದೆಬಡಿಯಲು ಬಂದ, ಅದಾದಲೇ ಪಶ್ಚಿಮದಲ್ಲಿ ಸಾಮ್ರಾಜ್ಯಶಾಹಿಗಳ ವಸಾಹತು ಸ್ಥಾಪನೆಗೆ ಬೆನ್ನೆಲುಬಾಗಿ ನಿಂತು ಹೆಸರು ಪಡೆದ ಕರ್ನಲ್ ಕ್ಲೆಮೆಂಟ್ ಹಿಲ್‌ನನ್ನು ಕಂಪೆನಿ ಸರಕಾರ ಬಹು ನಿರೀಕ್ಷೆಯಿಂದ ಸಹಾಯಕರು, ಕುದುರೆ ಹಾಗೂ ಬಂದೂಕುಗಳೊಂದಿಗೆ ಕಳುಹಿಸಿಕೊಟ್ಟಿತ್ತು. ಆದರೆ ಸ್ಥಳೀಯರ ಗೆರಿಲ್ಲಾ ಯುದ್ಧದ ಮುಂದೆ ಯಾವ ತರಬೇತಿ ಪಡೆದ ಸೈನಿಕರು ಕುದುರೆ ಹಾಗೂ ಕರ್ನಲ್ ಬದುಕಲಿಲ್ಲ ಎನ್ನುತ್ತಾರೆ.
ಮದ್ರಾಸ್ ರೆಜಿಮೆಂಟಿನಲ್ಲಿದ್ದ ಮೇಜರ್ ಜನರಲ್ ಕರ್ನಲ್ ಕ್ಲೆಮೆಂಟ್ ಹಿಲ್ ಸಕಲ ಸಿದ್ಧತೆ ಗಳೊಂದಿಗೆ ಗೇರಸಪ್ಪಾ ತಲುಪಿದ್ದನು. ಆದರೆ ಸ್ಥಳೀಯರನ್ನು ಎದುರಿಸಲು ಆತನಿಂದ ಆಗಲಿಲ್ಲ. 20 ಜನವರಿ 1845ರಂದು ಕ್ಲೆಮೆಂಟ್ ಹಿಲ್ ಹೆಣವಾಗಿ ಬಿಟ್ಟ. ಆತನ ಶವವನ್ನು ಕಡಲ ಮಾರ್ಗವಾಗಿ ಇಂಗ್ಲೆಂಡಿಗೆ ಸಾಗಿಸುವ ಎಲ್ಲ ಪ್ರಯತ್ನಗಳು ವಿಫಲವಾದವು. ಆಗ ಆತನನ್ನು ಬಂದರಿನ ಸಮೀಪದ ಗುಡ್ಡದ ಮೇಲೆ ಸಮಾಧಿ ಮಾಡಿ ಮೇಲೊಂದು ಕಂಬ ನಿಲ್ಲಿಸಲಾಯಿತು.ಚರಿತ್ರೆಯಲ್ಲಿ ಕರಿಮೆಣಸಿನ ರಾಣಿ ಎಂದು ಖ್ಯಾತಳಾದ, ಪೋರ್ಚುಗೀಸರೊಂದಿಗೆ ನಿರಂತರ ಸೆಣಸಿದ ರಾಣಿ ಚೆನ್ನಭೈರಾದೇವಿಯ ಊರು ಈ ಮೂಲಕ ಅಮರವಾಗಿದೆ.