ಮೂಡಿಗೆರೆಯ ಆಲೂರು ಗ್ರಾಮದಲ್ಲಿದೆ ಗಾಂಧೀಘರ್

Update: 2017-08-14 17:42 GMT

ಚಿಕ್ಕಮಗಳೂರು: ಬ್ರಿಟಿಷರ ಗುಲಾಮಗಿರಿಯ ವಿರುದ್ಧ ದೇಶದ ಜನರನ್ನು ಬಡಿದೆಬ್ಬಿಸಲು ಮಹಾತ್ಮಾ ಗಾಂಧೀಜಿ ದೇಶಾದ್ಯಂತ ಸಂಚರಿಸುತ್ತಿದ್ದ ಸಮಯ. ಜನಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟದತ್ತ ಧುಮುಕುವಂತೆ ಪ್ರೇರೇಪಿಸಲು ಗಾಂಧೀಜಿ ನಡೆಯದ ದಾರಿಗಳಿಲ್ಲ. ಹಾಗೆಯೇ ಅವರು ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದತ್ತ ಹೊರಟಿದ್ದರು.

ಮೂಡಿಗೆರೆ ತಾಲೂಕಿನ ಆಲೂರು ರಾಮಸ್ವಾಮಿ, ಆಲೂರು ಗಿಡ್ಡಪ್ಪ ಮತ್ತು ಮುದ್ರೇಮನೆಯ ಬಿ.ಕೃಷ್ಣೇ ಗೌಡರು ಮಹಾತ್ಮಾ ಗಾಂಧೀಜಿಯವರ ಹೋರಾಟದಿಂದ ಪ್ರಭಾವಿತರಾಗಿದ್ದರು. ಈ ಭಾಗದಲ್ಲಿ ಬ್ರಿಟಿಷರ ವಿರುದ್ಧ ಜನರನ್ನು ಸಿಡಿದೆಬ್ಬಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡ ಗಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಆಲೂರು ಗ್ರಾಮಕ್ಕೆ ಗಾಂಧೀಜಿಯವರನ್ನು ಕರೆಸಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದರು. ಬ್ರಿಟಿಷರು ಅದಕ್ಕೆ ಅವಕಾಶ ನೀಡಲಿಲ್ಲ.

ಆಲೂರಿನತ್ತ ಹೆಜ್ಜೆ ಹಾಕುತ್ತಿದ್ದ ಮಹಾತ್ಮಾ ಗಾಂಧಿ ಸಹಿತ ಅವರ ಬಹುತೇಕ ಎಲ್ಲಾ ಅನುಯಾಯಿಗಳನ್ನು ತುಮಕೂರು ಬಳಿ ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದ್ದರು. ಹೀಗಾಗಿ ಮಹಾತ್ಮಾ ಗಾಂಧೀಜಿ ಆಲೂರಿಗೆ ಬರಲಿದ್ದ ಕಾರ್ಯಕ್ರಮ ಮೊಟಕುಗೊಂಡಿತ್ತು. ಕಾರ್ಯಕ್ರಮದ ವೆಚ್ಚ ತೂಗಿಸಲು 7 ಸಾವಿರ ರೂ.ಗಳನ್ನು ಆಲೂರು ರಾಮಸ್ವಾಮಿಯವರಿಗೆ ನೀಡಿದ್ದು ಖರ್ಚಾಗಲೇ ಇಲ್ಲ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, 1948ರಲ್ಲಿ ಗಾಂಧೀಜಿಯವರು ನಾಥೂರಾಮ್ ಗೂಡ್ಸೆ ಗುಂಡಿಗೆ ಬಲಿಯಾಗಿದ್ದರು.

ಹಿಂದೆ ಆಲೂರಿನಲ್ಲಿ ನಡೆಯಬೇಕಿದ್ದ ಗಾಂಧೀಜಿಯವರ ಕಾರ್ಯಕ್ರಮಕ್ಕೆ ನೀಡಿದ್ದ 7 ಸಾವಿರ ರೂ.ಗಳೊಂದಿಗೆ ಹೆಚ್ಚುವರಿಯಾಗಿ 6 ಸಾವಿರ ರೂ.ಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಒಟ್ಟು 13 ಸಾವಿರ ರೂ.ಗಳಲ್ಲಿ ರಾಷ್ಟ್ರಪಿತನ ನೆನಪಿಗಾಗಿ 1956ರಲ್ಲಿ ಆಲೂರು ಗ್ರಾಮದಲ್ಲಿ ಸ್ಥಳೀಯರು ಸರಕಾರಿ ಜಾಗದಲ್ಲಿ ಭವನವನ್ನು ನಿರ್ಮಿಸಿ ‘ಗಾಂಧೀಘರ್’ ಎಂದು ಹೆಸರಿಟ್ಟಿದ್ದಾರೆ.

ತದನಂತರ ಬಾಪು ಧಾನ್ಯ ಕೋಟಿ ಎಂಬ ಹೆಸರಿನಲ್ಲಿ ಸಂಘವನ್ನು ಸ್ಥಾಪಿಸಿ ಈತನಕ ನಡೆಸಿ ಕೊಳ್ಳುತ್ತಿದ್ದಾರೆ. ಸಂಘಕ್ಕೆ ಬಿ.ಕೆ.ಜಗನ್ಮೋಹನ್ ಆಜೀವ ಮಹಾಸಭಾ ಅಧ್ಯಕ್ಷರಾಗಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಅಧ್ಯಕ್ಷರಾಗಿ ಬಿಳಿಯಪ್ಪ, ಆಡಿಟರ್‌ಗಳಾಗಿ ಕೆ.ರಾಮಯ್ಯ, ಚಂದ್ರಪ್ಪ, ಎಚ್.ಎಂ.ರವಿ ಎಂಬವರಿದ್ದಾರೆ. ಸಂಘ ಖಾತೆಯಲ್ಲಿ ಸದ್ಯ ಸುಮಾರು 17 ಲಕ್ಷ ರೂ.ಗಳಿವೆ.

 ಗಾಂಧೀಘರ್‌ನಲ್ಲಿ ಮಹಾತ್ಮಾ ಗಾಂಧೀಜಿಯವರ ಬಾಲ್ಯದ ಸಹಿತ ವಿವಿಧ ಭಾವಚಿತ್ರಗಳನ್ನು ಗೋಡೆಯ ಮೇಲೆ ತೂಗು ಹಾಕಿರುವ ದೃಶ್ಯ ಕಾಣಿಸುತ್ತದೆ. ಗಾಂಧೀಘರ್ ನಿರ್ಮಿಸಿದ ಜಾಗದಲ್ಲಿ 7 ಎಕರೆ ಸರಕಾರಿ ಜಾಗವಿದ್ದು, ಸುತ್ತಮುತ್ತಲು ಶಾಲೆ, ಅಂಗನವಾಡಿ ಕೇಂದ್ರ, ಆಯುರ್ವೇದಿಕ್ ಆಸ್ಪತ್ರೆ, ಪಂಚಾಯತ್ ಕಾರ್ಯಾಲಯವಿದೆ. ಗಾಂಧೀಘರ್ ಕಟ್ಟಡದ ಮೇಲ್ಛಾವಣಿಯನ್ನು 5 ವರ್ಷಗಳ ಹಿಂದೆ ನವೀಕರಿಸಿದ್ದರೂ ಗೋಡೆ, ಕಿಟಕಿ, ಬಾಗಿಲುಗಳು ಗೆದ್ದಲು ಹಿಡಿದಿವೆ.

ಗಾಂಧೀಘರ್ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೆನಪಿಗಾಗಿ ಹಿರಿಯರು ಕಟ್ಟಿರುವ ಭವನವಾಗಿದೆ. ಇದರೊಳಗೆ ಗಾಂಧೀಜಿಯ ವರಿಗೆ ಸಂಬಂಧಿಸಿದ ಹತ್ತು, ಹಲವು ಭಾವಚಿತ್ರಗಳಿವೆ. ಭವನದ ಕಿಟಕಿ, ಬಾಗಿಲುಗಳ ಸಹಿತ ಅಮೂಲ್ಯ ಭಾವಚಿತ್ರ ಗಳೂ ಕೂಡ ಸಂಪೂರ್ಣ ಗೆದ್ದಲು ಹಿಡಿಯುತ್ತಿದೆ. ಇದನ್ನು ನವೀಕರಣಗೊಳಿಸಿ ಸ್ಮಾರಕವನ್ನಾಗಿ ಉಳಿಸಿ ಸಂರಕ್ಷಿಸುವ ಆವಶ್ಯಕತೆ ಇದೆ

ಆಲೂರು ಪಂಚಾಕ್ಷರಿ,
ಆಲೂರು ನಿವಾಸಿ

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News