1857ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ಉಪೇಂದ್ರ ಕಾಮತ್

Update: 2017-08-14 18:18 GMT

ಸ್ವಾತಂತ್ರ್ಯ ಹೋರಾಟದ ಹಿರಿಮೆಯನ್ನು ಹೆಚ್ಚು ಹೇಳಿಕೊ ಳ್ಳದ ಬೆಳ್ತಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮೆಲುಕುಹಾಕುವಂತಹ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ವೊಂದಿದೆ. ಆದರೆ ಈ ಐತಿಹಾಸಿಕ ಸ್ಮಾರಕ ಎಲ್ಲರ ಉಪೇಕ್ಷೆಗೆ ಪಾತ್ರ ವಾಗಿದ್ದು ಬೆಳ್ತಂಗಡಿಯ ಜನರಿಗೇ ಇದರ ಪರಿಚಯವಿಲ್ಲ ವಾಗಿದೆ ಎಂಬುದು ಬೇಸರದ ವಿಷಯ.   

ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಈ ಸ್ಮಾರಕವಿದೆ. 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಶತಮನೋತ್ಸವದ ಸವಿನೆನಪಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಬೆಳ್ತಂಗಡಿಯ ಕಾಂತಾವರ ಉಪೇಂದ್ರ ಕಾಮತ್ ಸ್ಮಾರಕವನ್ನು 1957ರಲ್ಲಿ ಸ್ಥಾಪಿಸಲಾಗಿತ್ತು. 1957ರ ಸ್ವಾತಂತ್ರ್ಯ ದಿನಾಚರಣೆಯ ದಿನವೇ ಸ್ಮಾರಕ ಸಮಭ್ರಮದಿಂದ ಉದ್ಘಾಟನೆಗೊಂಡಿತ್ತು. ಉಪೇಂದ್ರ ಕಾಮತ್ ಅವರ ಕುಟುಂಬಸ್ಥರಾದ ಗಾಂಧಿವಾದಿ ಕೆ.ಪುಂಡಲೀಕ ಕಾಮತ್ ಅವರ ನೇತೃತ್ವದಲ್ಲಿ ಈ ಸ್ಮಾರಕ ನಿರ್ಮಾಣಗೊಂಡಿತ್ತು. ಅರ್ಧ ಶತಮಾನದ ಹಿಂದೆ ಸ್ಥಾಪನೆಯಾದ ಒಂದುವರೆ ಶತಮಾನದ ಹಿಂದಿನ ಕತೆಯನ್ನು ಹೇಳುವ ಇಂತಹ ಒಂದು ಅಪರೂಪದ ಸ್ಮಾರಕ ಬೆಳ್ತಂಗಡಿಯಲ್ಲಿ ಇರುವ ಬಗ್ಗೆ ಅವರ ಕುಟುಂಬಸ್ಥರ ಹೊರತಾಗಿ ಯಾರಿಗೂ ಮಾಹಿತಿಯೇ ಇಲ್ಲವಾಗಿದೆ. ಮೊದಲೆಲ್ಲ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಇಲ್ಲಿ ಪುಷ್ಪಾರ್ಚನೆ ಮಾಡಲಾಗುತ್ತಿತ್ತು ಆದರೆ ಕ್ರಮೇಣ ಅದು ನಿಂತುಹೋಗಿದೆ.

ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸಾರುವ ಸ್ಮಾರಕಗಳಿಗೆ ಸುಣ್ಣ ಬಣ್ಣ ಹಚ್ಚಿ ಅಲಂಕರಿಸಿ ಎಲ್ಲರೂ ಹಿಂದಿನ ಹೋರಾಟಗಳ ನೆನಪು ಮೆಲುಕು ಹಾಕುವಂತೆ ಮಾಡುವುದು ಸಾಮಾನ್ಯ. ಆದರೆ ಈ ಸ್ಮಾರಕ ಮಾತ್ರ ಯಾರೂ ಗಮನಿಸದೆ ಪಾಳು ಬಿದ್ದಂತಿದೆ. ಈ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಈಗ ಸ್ಥಳೀಯ ಯುವಕರಿಗೆ ಬ್ಯಾನರ್ ಕಟ್ಟಲು ಕಂಬವಾಗಿ ಬಳಕೆಯಾಗುತ್ತಿರುವುದು ಬಿಟ್ಟರೆ ಅದರತ್ತ ಯಾರೂ ಗಮನವನ್ನೇ ಹರಿಸುತ್ತಿಲ್ಲ. ಇದರ ಸುತ್ತ ಗೂಡಂಗಡಿಗಳು ಹಾಗೂ ಬ್ಯಾನರ್‌ಗಳೇ ತುಂಬಿಕೊಂಡಿದ್ದು ಸ್ಮಾರಕವೇ ಕಾಣಿಸುವುದಿಲ್ಲ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿಯು ತಾಲೂಕು ಆಡಳಿತ ಇದರತ್ತ ಗಮನವನ್ನೇ ಹರಿಸಿಲ್ಲ ಎಂಬುದು ದುರಂತ.

Writer - -ಶಿಬಿ ಧಮರ್ಸ್ಥಳ

contributor

Editor - -ಶಿಬಿ ಧಮರ್ಸ್ಥಳ

contributor

Similar News