ಈ ಗ್ರಾಮ ಯೋಧರು, ಶಿಕ್ಷಕರ ನೆಲೆವೀಡು

Update: 2017-08-14 18:22 GMT

ಬೆಳಗಾವಿಯಿಂದ ಕೇವಲ 38 ಕಿ.ಮೀ.ದೂರದಲ್ಲಿರುವ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮವು ಯೋಧರ ನೆಲೆವೀಡಾಗಿದೆ. ಈ ಗ್ರಾಮದ 400ಕ್ಕೂ ಅಧಿಕ ಯುವಕರು ಸೇನೆ ಮತ್ತು ಗಡಿ ರಕ್ಷಣಾ ಪಡೆ (ಬಿಎಸ್‌ಎಫ್) ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಮಾರು 1,200 ಮನೆಗಳಿರುವ, 7,500 ಜನಸಂಖ್ಯೆಯುಳ್ಳ ಈ ಗ್ರಾಮವು ದೇಶಸೇವೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತೀ ಕುಟುಂಬದ ಕನಿಷ್ಠ ಓರ್ವ ವ್ಯಕ್ತಿ ಸೇನೆಯನ್ನು ಸೇರಬೇಕು ಇಲ್ಲವೇ ಎಳೆಯ ಮನಸ್ಸುಗಳನ್ನು ತಿದ್ದಿ ಸುಸಂಸ್ಕೃತರನ್ನಾಗಿಸಲು ಶಿಕ್ಷಕ ವೃತ್ತಿಯನ್ನು ಕೈಗೊಳ್ಳಬೇಕು ಎಂದು ಈ ಗ್ರಾಮವು ದೃಢವಾಗಿ ನಂಬಿಕೊಂಡು ಬಂದಿದೆ.

ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ಮರಳುವ ಹಿರಿಯ ಯೋಧರು ಸೇನೆಯನ್ನು ಸೇರಲು ಯುವಕರಲ್ಲಿ ಸ್ಫೂರ್ತಿ ತುಂಬುವ ಜೊತೆಗೆ ಸೇನಾಭರ್ತಿ ರ್ಯಾಲಿಗಳಲ್ಲಿ ಪಾಲ್ಗೊಳ್ಳಲು ಅವರನ್ನು ತರಬೇತುಗೊಳಿಸುತ್ತಾರೆ. ಕಾರ್ಗಿಲ್ ವೀರರು ಸೇರಿದಂತೆ ಗ್ರಾಮದ ಸುಮಾರು 85 ಯೋಧರು ವಿವಿಧ ರಾಜ್ಯಗಳಲ್ಲಿಯ ಸೇನಾನೆಲೆಗಳಲ್ಲಿ ಕರ್ತವ್ಯ ಸಲ್ಲಿಸಿದ ಬಳಿಕ ಕಳೆದ ಕೆಲವು ವರ್ಷಗಳಲ್ಲಿ ನಿವೃತ್ತರಾಗಿರುವುದರಿಂದ ಈಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಗ್ರಾಮದ ಯುವಕರ ಸಂಖ್ಯೆ 400ರಿಂದ ಕೆಳಗಿಳಿದಿದೆ. ಆದರೆ ಇನ್ನು ಕೆಲವೇ ಸಮಯದಲ್ಲಿ ಹೆಚ್ಚಿನ ಯುವಕರು ಸೇನೆಗೆ ಸೇರ್ಪಡೆಗೊಂಡು ಈ ಸಂಖ್ಯೆಯನ್ನು ಹೆಚ್ಚಿಸುತ್ತಾರೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ಹೊಂದಿದ್ದಾರೆ. ಅಂದ ಹಾಗೆ ರಾಜ್ಯದ ವಿವಿಧೆಡೆಗಳಲ್ಲಿಯ ಶಾಲಾ-ಕಾಲೇಜು ಗಳಲ್ಲಿ ಈ ಗ್ರಾಮದ ಸುಮಾರು 500 ಜನರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದಲ್ಲಿ ನಾಲ್ಕು ಸರಕಾರಿ ಪ್ರಾಥಮಿಕ ಶಾಲೆಗಳು ಮತ್ತು ಒಂದು ಖಾಸಗಿ ಪ್ರೌಢಶಾಲೆ ಇವೆ. ರಜೆಯಲ್ಲಿ ಗ್ರಾಮಕ್ಕೆ ಮರಳುವ ಯೋಧರು ಮತ್ತು ನಿವೃತ್ತ ಯೋಧರನ್ನು ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಉತ್ಸವಗಳಿಗೆ ಅತಿಥಿಗಳಾಗಿ ಆಹ್ವಾನಿಸುವ ಪರಿಪಾಠವನ್ನು ನಾವು ಬೆಳೆಸಿಕೊಂಡಿದ್ದೇವೆ ಎಂದು ಸರಕಾರಿ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ಆರ್.ಆರ್.ತೋರಣಗಟ್ಟಿ ಹೇಳಿದರು.

ನೇಗಿನಹಾಳ ಪುಟ್ಟಗ್ರಾಮವಾಗಿದ್ದರೂ ನಾವು ಹಲವಾರು ಜವಾಬ್ದಾರಿಯುತ ಪ್ರಜೆಗಳನ್ನು ಈ ದೇಶಕ್ಕೆ ನೀಡಿದ್ದೇವೆ. ನಮ್ಮ ಗ್ರಾಮವನ್ನು ‘ಯೋಧರ ಗ್ರಾಮ’ಎಂದು ಜನರು ಕರೆಯುವಾಗ ನಮಗೆ ಹೆಮ್ಮೆಯುಂಟಾಗುತ್ತದೆ. ಇಲ್ಲಿಯ ಹೆಚ್ಚುಕಡಿಮೆ ಎಲ್ಲ ಮನೆಗಳಲ್ಲಿ ಓರ್ವ ಯೋಧ ಅಥವಾ ಶಿಕ್ಷಕ ನಿಮಗೆ ಸಿಕ್ಕೇ ಸಿಗುತ್ತಾನೆ ಎಂದು ಯೋಧ ರಮೇಶ ಪೂಜಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News