ಉ.ಕೊರಿಯದಿಂದ ಆಮದು ಪ್ರಕ್ರಿಯೆ ಸ್ಥಗಿತಗೊಳಿಸಿದ ಚೀನಾ

Update: 2017-08-15 14:30 GMT

ಬೀಜಿಂಗ್, ಆ.15: ಉತ್ತರಕೊರಿಯಾದ ಮೇಲೆ ವಿಶ್ವಸಂಸ್ಥೆ ಹೊಸದಾಗಿ ವಿಧಿಸಿರುವ ನಿರ್ಬಂಧದ ಹಿನ್ನೆಲೆಯಲ್ಲಿ ಆ ದೇಶದಿಂದ ಪ್ರಮುಖ ವಷ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನು ಚೀನಾ ಸ್ಥಗಿತಗೊಳಿಸಿದೆ. ಕಲ್ಲಿದ್ದಲು, ಕಬ್ಬಿಣ, ಕಬ್ಬಿಣದ ಅದಿರು, ಸಾಗರಖಾದ್ಯ ವಸ್ತುಗಳನ್ನು ತನ್ನ ಮಿತ್ರರಾಷ್ಟ ಉ.ಕೊರಿಯದಿಂದ ಚೀನಾ ಆಮದು ಮಾಡಿಕೊಳ್ಳುತ್ತಿತ್ತು.

 ಉತ್ತರ ಕೊರಿಯ ಮತ್ತು ಅಮೆರಿಕದ ಮಧ್ಯೆ ಉದ್ವಿಗ್ನತೆಯ ಸ್ಥಿತಿ ಹೆಚ್ಚುತ್ತಿರುವಂತೆಯೇ ಚೀನಾ ಕೈಗೊಂಡಿರುವ ಕ್ರಮ ಗಮನಾರ್ಹವಾಗಿದೆ. ವಿಶ್ವಸಂಸ್ಥೆ ಹೊಸದಾಗಿ ವಿಧಿಸಿರುವ ನಿರ್ಬಂಧದ ಅನುಸಾರ ಉತ್ತರ ಕೊರಿಯದಿಂದ ಕಲ್ಲಿದ್ದಲು, ಕಬ್ಬಿಣ, ಕಬ್ಬಿಣದ ಅದಿರು ಮತ್ತು ಸಾಗರಖಾದ್ಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ ತಿಂಗಳು ಉ.ಕೊರಿಯ ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿದ ಬಳಿಕ ಆ ದೇಶದ ಮೇಲೆ ವಿಶ್ವಸಂಸ್ಥೆ ನಿರ್ಬಂಧ ವಿಧಿಸಿತ್ತು. ಉ.ಕೊರಿಯಾವು ತನ್ನ ಆರ್ಥಿಕತೆಯ ಉಳಿವಿಗೆ ಚೀನಾವನ್ನು ಬಹುತೇಕ ಅವಲಂಬಿಸಿದ್ದು ಆ ದೇಶದ ಬಗ್ಗೆ ಚೀನಾ ಮೃದುಧೋರಣೆ ತಳೆದಿದೆ ಎಂದು ಅಮೆರಿಕ ಟೀಕಿಸಿತ್ತು.

 ಈ ಮಧ್ಯೆ ಚೀನಾದ ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಕಾಂಗ್ ಕ್ಸುನಾಯು ಅವರನ್ನು ಕೊರಿಯ ಪರ್ಯಾಯ ದ್ವೀಪಪ್ರದೇಶಕ್ಕೆ ವಿಶೇಷ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ವು ದವೆಯ್ ಅವರನ್ನು ತೆರವುಗೊಳಿಸಿ ಈ ನೇಮಕ ನಡೆಸಲಾಗಿದೆ. ಕೊರಿಯ ಬುಡಕಟ್ಟು ಜನಾಂಗಕ್ಕೆ ಸೇರಿರುವ ಕಾಂಗ್ ಇದುವರೆಗೆ ವಿದೇಶ ಸಚಿವಾಲಯದಲ್ಲಿ ಏಶ್ಯನ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈ ನೇಮಕಾತಿಗೂ ಕೊರಿಯ ದ್ವೀಪ ಪ್ರದೇಶದಲ್ಲಿ ತಲೆದೋರಿರುವ ಉದ್ವಿಗ್ನತೆಯ ಸ್ಥಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಹುವ ಚುನ್‌ಯಿಂಗ್ ಹೇಳಿದ್ದಾರೆ. ಕೊರಿಯ ಪರ್ಯಾಯದ್ವೀಪದ ಬಗೆಗಿನ ಚೀನಾದ ಧೋರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News