ಅಮೆರಿಕದ ಸೇನಾನೆಲೆಯ ಮೇಲೆ ಆಕ್ರಮಣ: ಉ.ಕೊರಿಯ ಬೆದರಿಕೆ

Update: 2017-08-15 14:45 GMT

ವಾಷಿಂಗ್ ಟನ್, ಆ.15: ಅಮೆರಿಕದ ಸೇನಾ ನೆಲೆಯನ್ನು ಹೊಂದಿರುವ ಗುವಾಮ್ ಪ್ರದೇಶದ ಮೇಲೆ ಆಕ್ರಮಣ ನಡೆಸುವುದಾಗಿ ಉತ್ತರಕೊರಿಯಾ ಬೆದರಿಸಿರುವಂತೆಯೇ ಇದೀಗ ಮೂರನೇ ಮಹಾಯುದ್ದ ತಪ್ಪಿಸುವ ಎಲ್ಲಾ ಆಯ್ಕೆಗಳೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿದೆ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.

ಈ ಮಧ್ಯೆ, ಗುವಾಮ್ ಮೇಲೆ ಪ್ರಕ್ಷೇಪಕ ಕ್ಷಿಪಣಿ ದಾಳಿ ನಡೆಸಿದರೆ ಉಂಟಾಗುವ ಸಂಕೀರ್ಣ ಪರಿಣಾಮದ ಕುರಿತು ಉತ್ತರ ಕೊರಿಯದ ಅಧ್ಯಕ್ಷ ಕಿಮ್ ಜೊಂಗ್-ಉನ್ ತಮ್ಮ ರಾಜಕೀಯ ಸಲಹೆಗಾರರೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ. ಉ.ಕೊರಿಯದ ಅಧ್ಯಕ್ಷರು ಅಮೆರಿಕದ ಪ್ರದೇಶಕ್ಕೆ ದಾಳಿ ನಡೆಸುವ ಯೋಜನೆಯನ್ನು ಪುನರ್ಪರಿಶೀಲಿಸಿದ್ದು, ಟ್ರಂಪ್ ಅವರ ಮುಂದಿನ ನಡೆಯನ್ನು ಗಮನಿಸಿ ಮುಂದಡಿ ಇಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

 ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಹೇಳಿಕೆ ನೀಡಿರುವ ಟ್ರಂಪ್, ಅಮೆರಿಕದ ಮೇಲೆ ನಡೆಯುವ ಯಾವುದೇ ಆಕ್ರಮಣಕ್ಕೂ ‘ಕಿಚ್ಚು ಮತ್ತು ರೋಷದಿಂದ’ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.

  ಗುವಾಮ್‌ನಲ್ಲಿ ಬೆಂಕಿ ಹಚ್ಚಲು ಉತ್ತರ ಕೊರಿಯ ಸಿದ್ಧವಾಗಿದೆ. ಆದರೆ ‘ಮೂರ್ಖ ಯಾಂಕಿಗಳು(ಅಮೆರಿಕನ್ನರು) ಏನು ಮಾಡುತ್ತಾರೆ ಎಂದು ಕಾದು ನೋಡಿ ನಾವು ಮುಂದಡಿ ಇಡುತ್ತೇವೆ ಎಂದು ಉ.ಕೊರಿಯ ತಿಳಿಸಿದೆ. ಆದರೆ ಅಮೆರಿಕ ಮೊದಲಾಗಿ ದಾಳಿ ನಡೆಸುವ ಸಾಧ್ಯತೆ ತಳ್ಳಿ ಹಾಕಲಾಗದು ಎಂದಿರುವ ಉಪಾಧ್ಯಕ್ಷ ಪೆನ್ಸ್ , ‘ಎಲ್ಲಾ ಆಯ್ಕೆ’ಗಳ ಕುರಿತು ವೈಟ್‌ಹೌಸ್ ಗಮನ ಹರಿಸಲಿದೆ ಎಂದಿದ್ದಾರೆ.

  ಉತ್ತರ ಕೊರಿಯದ ವಿಷಯದಲ್ಲಿ ಅಮೆರಿಕ ಹಲವು ದಶಕಗಳಿಂದ ತಳೆದಿರುವ ‘ತಾಳ್ಮೆಯ ಧೋರಣೆ ’ ವಿಫಲವಾಗಿದೆ. ಅಮೆರಿಕದ ಆಡಳಿತವು ಮಾತುಕತೆ ಮತ್ತು ಸಂಯಮದ ವರ್ತನೆಯಿಂದ ಕೊರಿಯ ದ್ವೀಪವನ್ನು ಪರಮಾಣು ಬೆದರಿಕೆ ರಹಿತ ವಲಯವನ್ನಾಗಿಸಬೇಕೆಂಬ ದೀರ್ಘಾವಧಿಯ ಗುರಿಯನ್ನು ಹೊಂದಿತ್ತು. ಆದರೆ ಅಧ್ಯಕ್ಷ ಕಿಮ್ ಯುಗದಲ್ಲಿ ಉತ್ತರಕೊರಿಯಾ ಪ್ರಕ್ಷೇಪಕ ಕ್ಷಿಪಣಿ ಮತ್ತು ಪರಮಾಣು ಶಸ್ತ್ರದ ವಿಷಯದಲ್ಲಿ ಹಠಮಾರಿ ಧೋರಣೆ ತಳೆದಿದೆ. ಸಂಯಮದ ದಿನಗಳು ಮುಗಿದಿವೆ ಎಂದು ಅಧ್ಯಕ್ಷ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ . ನಾವು ಎಲ್ಲಾ ಆಯ್ಕೆಗಳ ಕುರಿತೂ ಯೋಚಿಸುತ್ತಿದ್ದೇವೆ. ಪ್ರದೇಶದಲ್ಲಿರುವ ನಮ್ಮ ಮಿತ್ರರ ನೆರವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದು ಪೆನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News