ಭಾರತದಲ್ಲಿ ‘ಬ್ಲೂವೇಲ್ ಗೇಮ್’ ನಿಷೇಧಕ್ಕೆ ಸೂಚನೆ

Update: 2017-08-15 17:53 GMT

ಹೊಸದಿಲ್ಲಿ, ಆ. 15: ಅಪಾಯಕಾರಿ ಆನ್‌ಲೈನ್ ಆಟ ಬ್ಲೂವೇಲ್ ಚಾಲೆಂಜ್‌ನ ಲಿಂಕ್‌ಗಳನ್ನು ವಿಳಂಬಿಸದೆ ತೆಗೆದು ಹಾಕುವಂತೆ ಗೂಗಲ್, ಫೇಸ್‌ಬುಕ್, ವ್ಯಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಮ್, ಮೈಕ್ರೋಸಾಫ್ಟ್ ಹಾಗೂ ಯಾಹೂಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ವಿದೇಶ ಹಾಗೂ ಭಾರತದಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಈ ಆನ್‌ಲೈನ್ ಆಟ ಕಾರಣವಾಗಿದ್ದು, ಈ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿತ್ತು.

ಮಕ್ಕಳು ಬ್ಲೂವೇಲ್ ಚಾಲೆಂಜ್ ಗೇಮ್ ಆಡಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಭಾರತದಲ್ಲಿ ವರದಿಯಾಗಿವೆ. ಆದುದರಿಂದ ಈ ಆಟ ಹಾಗೂ ಇದರಂತೆ ಇರುವ ಇತರ ಆಟಗಳ ಲಿಂಕ್ ಅನ್ನು ಕೂಡಲೇ ತೆಗೆದು ಹಾಕುವಂತೆ ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ ಆಗಸ್ಟ್ 11ರಂದು ಈ ಸಂಸ್ಥೆಗಳಿಗೆ ಕಳುಹಿಸಿದ ಪತ್ರದಲ್ಲಿ ನಿರ್ದೇಶಿಸಿದೆ.

 ಈ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಕಾನೂನು ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಸಚಿವಾಲಯವನ್ನು ಕೋರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ಬ್ಲೂವೇಲ್ ಚಾಲೆಂಜ್ ಗೇಮ್ ಒಂದು ರೀತಿಯ ಸಾಯೋ ಆಟ. ನಿರ್ದಿಷ್ಟ ಗುರಿ ಪೂರ್ಣಗೊಳಿಸಲು ಆಟಗಾರರಿಗೆ 50 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ಗುರಿ ಆತ್ಮಹತ್ಯೆಯಾಗಿರುತ್ತದೆ. ಸವಾಲು ಪೂರ್ಣಗೊಳಿಸಿದ ಬಳಿಕ ಆಟಗಾರರು ತಮ್ಮ ಫೋಟೋಗಳನ್ನು ಶೇರ್ ಮಾಡುವಂತೆ ತಿಳಿಸಲಾಗುತ್ತದೆ.

 ಅಂತರ್‌ಜಾಲದಲ್ಲಿ ಈ ವಿಡಿಯೋ ಗೇಮ್ ಲಭ್ಯವಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ, ಆಟ ನಿರ್ವಹಣೆದಾರರು ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿ ಬಳಸಿಕೊಂಡು ಮಕ್ಕಳು ಈ ಆಟ ಆಡುವಂತೆ ಆಹ್ವಾನ ನೀಡುತ್ತದೆ. ಆಟದ ಅಂತ್ಯದಲ್ಲಿ ಮಕ್ಕಳು ಸ್ವ ಹಾನಿ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಉತ್ತೇಜನ ನೀಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಆನ್‌ಲೈನ್ ಗೇಮ್ ಆಡಿ ಮುಂಬೈ, ಪಶ್ಚಿಮ ಮಿಡ್ನಾಪುರ, ಪಶ್ಚಿಮಬಂಗಾಳ ಜಿಲ್ಲೆಯಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಹಾಗೂ ತಮ್ಮನ್ನೇ ತಾವು ಗಾಯಗೊಳಿಸಿದ ಘಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News