ಅಮಾಯಕರ ಮೇಲೆ ದೌರ್ಜನ್ಯದ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ: ಪಿಯುಸಿಎಲ್

Update: 2017-08-16 08:35 GMT

ಮಂಗಳೂರು, ಆ.16: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ತನಿಖೆ ಹೆಸರಿನಲ್ಲಿ ಪೊಲೀಸರು 150ಕ್ಕೂ ಹೆಚ್ಚು ಮುಸ್ಲಿಂ ಯುವಕರ ಮೇಲೆ ದೌರ್ಜನ್ಯ ನಡೆಸಿದ್ದು, ಈ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಲಾಗುವುದು ಎಂದು ಪಿಯುಸಿಎಲ್ ಮುಖಂಡ ಪಿ.ಬಿ. ಡೇಸ ಹೇಳಿದರು.

ದೌರ್ಜನ್ಯಕ್ಕೊಳಗಾಗಿರುವ ಆರು ಮಂದಿಯನ್ನು ನಾವು ಸಂಪರ್ಕಿಸಿದ್ದು, ತನಿಖೆ ವೇಳೆ ನಿಯಮ ಮೀರಲಾಗಿದೆ. ಸುಮಾರು 10 ದಿನ ಅಕ್ರಮವಾಗಿ ಠಾಣೆಯಲ್ಲಿಟ್ಟು, ಖಾಲಿ ಕಾಗದದಲ್ಲಿ ಸಹಿ ಹಾಕಿ ಬಿಟ್ಟು ಬಿಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.

ಮೀನುಗಾರಿಕೆ ಮತ್ತು ಕೂಲಿ ಕೆಲಸಕ್ಕೆ ಹೋಗಿ ತಮ್ಮ ಜೀವನ ಸಾಗಿಸುತ್ತಿದ್ದ 150 ಮಂದಿಯನ್ನು ಪೊಲೀಸರು ಬಂಧಿಸಿ ಹಿಂಸಿಸಿರುವುದು ಖಂಡನೀಯ. ಯಾರನ್ನಾದರೂ ಬಂಧಿಸಿದರೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಬೇಕು. ಪೊಲೀಸರು ಆ ರೀತಿ ಮಾಡಿಲ್ಲ. ಠಾಣೆಯಲ್ಲಿ ಕುಳ್ಳಿರಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಸುಪ್ರಿಂ ಕೋರ್ಟ್ ಆದೇಶವನ್ನು ಕೂಡ ಸಂಪೂರ್ಣವಾಗಿ ಉಲ್ಲಂಸಿದ್ದಾರೆ ಎಂದು ಡೇಸಾ ಆರೋಪಿಸಿದರು.

ಜಿಲ್ಲೆಯ ಪೊಲೀಸರು ಪೂರ್ವಾಗ್ರಹಪೀಡಿತರಾಗಿ ತನಿಖೆ ನಡೆಸುತ್ತಾರೆ. ಅವರ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ದೂರು ನೀಡಲು ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರೇ ಇಲ್ಲ. ಪೊಲೀಸ್ ದೂರುಗಳ ಪ್ರಾಧಿಕಾರ ಕೂಡಾ ಕ್ರಿಯಾಶೀಲವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗುತ್ತಿದ್ದೇವೆ. ಸಂಕಷ್ಟದಲ್ಲಿ ಇರುವವರಿಗೆ ಪಿಯುಸಿಎಲ್ ಕಾನೂನು ನೆರವು ನೀಡಲಿದೆ ಎಂದು ಅವರು ಹೇಳಿದರು.

ಪಿಯುಸಿಎಲ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಕಬೀರ್, ಕಾರ್ಯದರ್ಶಿ ಆಗಸ್ಟಿನ್ ರಾಡ್ರಿಗಸ್, ಕಚೇರಿ ಪ್ರಬಂಧಕ ಪೌಲ್ಸ್ ಸಲ್ದಾನ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News