ಬಿಜೆಪಿ: ಮಾಬುಕಳದಿಂದ ಕುಂದಾಪುರದವರೆಗೆ ಪ್ರತಿಭಟನಾ ಪಾದಯಾತ್ರೆ

Update: 2017-08-16 11:36 GMT

ಉಡುಪಿ, ಆ.16: ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ, ರೇಶನ್ ಕಾರ್ಡ್ ವಿತರಣೆಯಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ, ಹಕ್ಕುಪತ್ರ, ಮರಳು ಸಮಸ್ಯೆ ವಿರುದ್ದ ಪ್ರತಿಭಟನಾ ಪಾದಯಾತ್ರೆಯನ್ನು ಮಾಬುಕಳದಿಂದ ಕುಂದಾಪುರದವರೆಗೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಮಾಬುಕಳದಲ್ಲಿ ಆರಂಭಗೊಂಡ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಪ್ರಚಾರಕ್ಕಾಗಿ ದಿನ ಕ್ಕೊಂದು ಹೇಳಿಕೆಗಳನ್ನು ನೀಡುವ ಆಹಾರ ಸಚಿವ ಯು.ಟಿ.ಖಾದರ್, ಜನರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ.

ರೇಶನ್ ಅಂಗಡಿಗಳಲ್ಲಿ ಪಡಿತರದಾರರಿಗೆ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ತರಲು ಹೊರಟಿರುವ ಸಚಿವರು, ಮೊದಲು ಬಡವರಿಗೆ ಸರಿಯಾಗಿ ಪಡಿತರ ಚೀಟಿಯನ್ನು ವಿತರಿಸುವ ಕೆಲಸ ಮಾಡಲಿ ಎಂದರು. ಬಡವರಿಗೆ ಉಚಿತ ಅಕ್ಕಿಯನ್ನು ನೀಡುವ ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಕೂಡ ಇದೆ. ಆದರೆ ಸಿದ್ಧರಾಮಯ್ಯ ಅದನ್ನು ಎಲ್ಲಿಯೂ ಹೇಳದೆ ಮುಚ್ಚಿಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪಡಿತರ ಚೀಟಿ ಸಮಸ್ಯೆಯನ್ನು ಬಗೆಹರಿಸಲು ಈ ಸರಕಾರ ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.

ಬಡ ಹಿಂದುಳೀದ ಮತ್ತು ಅಲ್ಪಸಂಖ್ಯಾತ ಮಕ್ಕಳೇ ಕಲಿಯುತ್ತಿರುವ ಕಲ್ಲಡ್ಕದ ಶ್ರೀರಾಮ ವಿದ್ಯಾಮಂದಿರದ ಶಾಲೆಗೆ ಬಿಜೆಪ ಸರಕಾರ ಇದ್ದ ಸಮಯದಲ್ಲಿ ಕೊಲ್ಲೂರು ದೇವಳದ ವತಿಯಿಂದ ಅನ್ನದಾನಕ್ಕೆ ಅನುದಾವನ್ನು ನೀಡಲು ಆರಂಭಿಸಿದ್ದು, ದ್ವೇಷದ ರಾಜಕೀಯಕ್ಕಾಗಿ ಕಲ್ಲಡ್ಕದ ಶ್ರೀರಾಮ ವಿದ್ಯಾಮಂದಿರ ಶಾಲೆಗೆ ನೀಡುತ್ತಿದ್ದ ಕೊಲ್ಲೂರು ದೇವಳದ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಸಚಿವ ರಮಾನಾಥ ರೈ ಸರಕಾರದ ಮೇಲೆ ಒತ್ತಡ ಹೇರಿ ಮಾಡಿದ್ದಾರೆ ಎಂದು ದೂರಿದ ಅವರು, ಇವರ ದ್ವೇಷ ಪರಿಣಾಮ ಸಮಸ್ಯೆಯಾಗಿರುವುದು ಕಲ್ಲಡ್ಕ ಪ್ರಭಾಕರ ಭಟ್ ಅವರಿಗಲ್ಲ, ಬದಲು ಶಾಲೆಯ ಹಿಂದುಳಿದ ವರ್ಗದ ಮಕ್ಕಳಿಗೆ ಎಂದರು.

ಹಕ್ಕು ಪತ್ರದ ಕುರಿತ ಸಮಸ್ಯೆಯನ್ನು ಸರಕಾರ ಈವರೆಗೆ ಬಗೆಹರಿಸಿಲ್ಲ ಮತ್ತು ಬಡವರಿಗೆ ಹಕ್ಕುಪತ್ರ ನೀಡಿಲ್ಲ. ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಮರಳಿನ ಸಮಸ್ಯೆ ಕಾಡುತ್ತಿದ್ದು, ಇದರಿಂದ ಕಾರ್ಮಿಕರು ಹಾಗೂ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಸರಕಾರ ಈ ಸಮಸ್ಯೆ ಬಗೆಹರಿಸುವ ಬದಲು ಕಣ್ಮುಚ್ಚಿ ಕುಳಿತಿದೆ. ಕೇವಲ ಕಾಟಾಚಾರಕ್ಕೆ ಸಭೆ ನಡೆಸುವ ಅಧಿಕಾರಿ ಗಳು ಸಮಸ್ಯೆಗೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.

ಪಾದಯಾತ್ರೆಗೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ, ರಾಜ್ಯ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರದ ವಿರುದ್ದ ಜನ ಆಕ್ರೋಶಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಲಿಸಲಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಿರಣ್ ಕುಮಾರ್, ಗೀತಾಂಜಲಿ ಸುವರ್ಣ, ಬಾಬು ಶೆಟ್ಟಿ, ಯಶ್ಪಾಲ್ ಸುವರ್ಣ, ಸುಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ವಿಠಲ್ ಪೂಜಾರಿ, ವೀಣಾ ಶೆಟ್ಟಿ, ಚಂದ್ರಮೋಹನ್, ಭಾರತಿ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ಮಾಬುಕಳದಿಂದ ಆರಂಭಗೊಂಡ ಪಾದಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಸ್ತಾನ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ, ಕೋಟೇಶ್ವರ ಮಾರ್ಗವಾಗಿ ಸಂಜೆ ಕುಂದಾಪುರ ತಲುಪಿತು. ಬಳಿಕ ಸಂಜೆ ಕುಂದಾಪುರದಲ್ಲಿ ಸಮಾರೋಪ ಸಮಾರಂಭ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News