ತ್ಯಾಜ್ಯ ಮುಕ್ತ ಜಿಲ್ಲೆಗೆ ಕ್ಷಣಗಣನೆ ಆರಂಭ: ಸಚಿವ ಪ್ರಮೋದ್

Update: 2017-08-16 14:48 GMT

ಉಡುಪಿ, ಆ.16: ಉಡುಪಿ ಜಿಲ್ಲೆಯನ್ನು ಸಂಪೂರ್ಣ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ಷಣಗಣನೆ ಆರಂಭಗೊಂಡಿದ್ದು, ದೇಶದ ಗುರಿಗಿಂತ ಒಂದು ವರ್ಷ ಮೊದಲೇ ಅಂದರೆ 2018ರ ಅಕ್ಟೋಬರ್ 2ರೊಳಗೆ ಈ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಸ್ವಚ್ಛ ಉಡುಪಿ ಮಿಷನ್ ವರ್ಷದ ಕ್ಷಣಗಣನೆ (ಕೌಂಟ್‌ಡೌನ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಜಿಲ್ಲೆಯು ಈ ನಿಗದಿತ ಗುರಿಯನ್ನು ಸಾಧಿಸಬೇಕಿದ್ದರೆ ಜಿಲ್ಲೆಯ ಎಲ್ಲಾ ಸ್ತರಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನಸಾಮಾನ್ಯರು ಸಂಪೂರ್ಣ ಸಹಕಾರವನ್ನು ನೀಡಬೇಕಾಗಿದೆ. ಗುರಿ ಸಾಧನೆಗಾಗಿ ಮುಂದಿನ ಅ.2ರವರೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರ ವರ್ಗಾವಣೆಯಾಗದಿರಲಿ ಎಂದು ತಾವು ಹಾರೈಸುವುದಾಗಿ ಪ್ರಮೋದ್ ತಿಳಿಸಿದರು.

ದೇಶದಲ್ಲಿ ಅತಿ ಕಡಿಮೆ ಸಮಸ್ಯೆ ಇರುವ ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದ್ದು, ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಿದರೆ ಇಡೀ ದೇಶದಲ್ಲಿ ಸಮಸ್ಯೆ ಮುಕ್ತ ಜಿಲ್ಲೆಯಾಗಿ ಉಡುಪಿ ಮೂಡಿಬರಲಿದೆ. ಜಿಲ್ಲೆಯಲ್ಲಿರುವ ಮರುಳುಗಾರಿಕೆಗೆ ಸಂಬಂಧಿಸಿದ ಸಮಸ್ಯೆ ಇನ್ನು 5-10 ದಿನದೊಳಗೆ ಪರಿಹಾರಗೊಳ್ಳಲಿದೆ. ಆಗ ಇಡೀ ರಾಜ್ಯದಲ್ಲೇ ಅತೀ ಕಡಿಮೆ ದರದಲ್ಲಿ ಮರಳು ಜಿಲ್ಲೆಯ ಜನರಿಗೆ ಲ್ಯವಾಗಲಿದೆ ಎಂದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕೆ, ಹಳ್ಳಿ-ಹಳ್ಳಿಗಳಿಗೆ ನರ್ಮ್ ಬಸ್ ಸೌಲ್ಯ ಒದಗಿಸಲಾಗುವುದು.ಯಾವುದೇ ಖಾಸಗಿ ಲಾಬಿಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಜನರಿಂದ ಆಯ್ಕೆಯಾದ ನಾವು ಜನರ ಪರವಾಗಿಯೇ ಕೆಲಸ ಮಾಡುತ್ತೇವೆ. ಜಿಲ್ಲಾಡಳಿತವೂ ಜನಪರವಾಗಿಯೇ ಕೆಲಸ ಮಾಡುವುದು ಎಂದವರು ಭರವಸೆ ನೀಡಿದರು.

ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ವೆಲ್ಲೂರಿನ ಇಂಡಿಯನ್ ಗ್ರೀನ್ ಸರ್ವಿಸಸ್‌ನ ಶ್ರೀನಿವಾಸನ್ ವೆಲ್ಲೂರು ಇವರಿಂದ ಸಂಬಂಧಿಸಿದ ಎಲ್ಲರಿಗೂ ತರಬೇತಿಯನ್ನು ಕೊಡಿಸಲಾಗಿದೆ. ಕಸ ವಿಲೇವಾರಿ ಯನ್ನು ಸಮರ್ಪಕವಾಗಿ ಮಾಡುವ ಕುರಿತಂತೆ ನಿರ್ಲಕ್ಷ ಬೇಡ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಪರಿಸರ ಹಾಳಾಗುವುದರ ಜೊತೆಗೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳಲಿದೆ. ಆದ್ದರಿಂದ ತ್ಯಾಜ್ಯ ವಿಲೇವಾರಿ ಮಾಡುವುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಕತರ್ವ್ಯ ಎಂದು ಪ್ರಮೋದ್ ಹೇಳಿದರು.

ಇಂಡಿಯನ್ ಗ್ರೀನ್‌ಸರ್ವಿಸಸ್‌ನ ವೆಲ್ಲೂರು ಶ್ರೀನಿವಾಸನ್ ಮಾತನಾಡಿ, ಉಡುಪಿ ಜಿಲ್ಲೆ ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿರುವುದರಿಂದ, ಇದನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡು ವುದು ಕಷ್ಟವಲ್ಲ. ಇದಕ್ಕಾಗಿ ಜಿಲ್ಲೆಗೆ ಪ್ರತ್ಯೇಕ ಸೂತ್ರ- ಕಾರ್ಯಕ್ರಮ ಪಟ್ಟಿ ತಯಾರಿಸಿದ್ದು, ಅದರಂತೆ ಕಾರ್ಯ ನಿರ್ವಹಿಸುವುದರ ಮೂಲಕ ಒಂದು ವರ್ಷದ ಒಳಗೆ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯ ಜನತೆ ಒಟ್ಟಾಗಿ ಶ್ರಮಿಸಿದರೆ ತ್ಯಾಜ್ಯ ಮುಕ್ತ ಜಿಲ್ಲೆ ಮಾಡುವುದು ಕಷ್ಟವಲ್ಲ. ಇದಕ್ಕೆ ಪ್ರತಿ ಮನೆಯವರ ಸಹಕಾರ ಅಗತ್ಯ. ಕಾರ್ಯಕರ್ತರು ಜಿಲ್ಲೆಯ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕಸ ವಿಂಗಡಣೆ ಮಾಡುವ ಕುರಿತಂತೆ ಅರಿವು ಮೂಡಿಸಲಿದ್ದಾರೆ. ಜನರು ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಬಗ್ಗೆ ಅರಿವು ಮೂಡಿಸಿಕೊಂಡು ಅದನ್ನೊಂದು ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು. ಆಗ ಸಮಸ್ಯೆ ಸುಲಭವಾಗಿ ಬಗೆಹರಿಯುವುದು ಎಂದರು.
ಯೋಜನೆಯ ಮೊದಲ ಹಂತದಲ್ಲಿ ಮೂರು ತಾಲೂಕುಗಳ ಒಂದೊಂದು ಗ್ರಾಪಂಗಳನ್ನು- ವಾರಂಬಳ್ಳಿ, ಗಂಗೊಳ್ಳಿ ಮತ್ತು ನಿಟ್ಟೆ- ಪೈಲೆಟ್ ಪಂಚಾಯತ್ ಆಗಿ ಆಯ್ಕೆ ಮಾಡಲಾಗಿದ್ದು, ಮೊದಲ ಮೂರು ತಿಂಗಳು ಅಲ್ಲಿ ಯೋಜನೆ ಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಪ್ರಿಯಾಂಕ ನುಡಿದರು. ಸಭೆಯಲ್ಲಿ ಈ ಪಂಚಾಯತ್‌ಗಳ ಅಧ್ಯಕ್ಷರಿಗೆ ಸಾಂಕೇತಿಕವಾಗಿ ಘನ ಮತ್ತು ದ್ರವ ತ್ಯಾಜ್ಯಗಳ ಪ್ರತ್ಯೇಕ ಸಂಗ್ರಹಕ್ಕೆ ಕೆಂಪು ಮತ್ತು ಹಸಿರು ಬಣ್ಣದ ಬಕೆಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ್ ಪಡುಬಿದ್ರೆ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

 ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಪಿಡಿಓ ವುಹೇಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News